ಜಮಖಂಡಿ ಜಿಲ್ಲೆ, ಸಾವಳಗಿ ತಾಲೂಕು ಘೋಷಿಸಿ

JKD 9-1
Published on

ಜಮಖಂಡಿ: ಜಮಖಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಹಾಗೂ ಸಾವಳಗಿಯನ್ನು ನೂತನ ತಾಲೂಕನ್ನಾಗಿ ಪರಿವರ್ತಿಸಬೇಕು ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರು ಕಂದಾಯ ಸಚಿವ ಆರ್. ಅಶೋಕ ಅವರಿಗೆ ಮನವಿ ಮೂಲಕ ಒತ್ತಾಯಿಸಿದ್ದಾರೆ.

ಆಡಳಿತದ ಸರಳೀಕರಣಕ್ಕಾಗಿ ರಾಜ್ಯದಲ್ಲಿ ಅನೇಕ ಹೊಸ ಜಿಲ್ಲೆಗಳು ಹಾಗೂ ತಾಲೂಕುಗಳ ರಚನೆ ಅನಿವಾರ್ಯವಾಗಿದೆ. ಉತ್ತರ ಕರ್ನಾಟಕದ ಮೊದಲಿನ ಅಖಂಡ ವಿಜಯಪುರ ಜಿಲ್ಲೆಯನ್ನು ವಿಭಜನೆ ಮಾಡುವ ಸಂದರ್ಭದಲ್ಲಿ ಜಮಖಂಡಿ ಜಿಲ್ಲೆಯಾಗಬೇಕಾಗಿತ್ತು.

ಆದರೆ ಅಂದಿನ ವಿಚಾರಣೆ ಅಧಿಕಾರ ಪಡೆದಿದ್ದವರಿಗೆ ಸ್ಥಳೀಯ ಪ್ರತಿನಿಧಿಗಳು ತಮ್ಮ ಬೇಡಿಕೆಯನ್ನು ಪ್ರಭಾವಿಯಾಗಿ ಮಂಡಿಸದೆ ಇರುವುದರಿಂದ ಜಮಖಂಡಿ ಜಿಲ್ಲಾ ಕೇಂದ್ರವಾಗದೆ ಹಾಗೆ ಉಳಿದುಕೊಂಡಿರುವದು ದುರ್ದೈವದ ಸಂಗತಿಯಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಧಾರವಾಡಕ್ಕಿಂತಲೂ ಭೌಗೋಳಿಕ ಹಾಗೂ ಜನಸಂಖ್ಯೆ ಹೆಚ್ಚಾಗಿದ್ದ ವಿಜಯಪುರ ಜಿಲ್ಲೆಯಲ್ಲಿ ಬಾಗಲಕೋಟೆ ಮಾತ್ರ ಹೊಸ ಜಿಲ್ಲೆಯಾಯಿತು. ಆದರೆ ಧಾರವಾಡವನ್ನು ಧಾರವಾಡ, ಗದಗ ಮತ್ತು ಹಾವೇರಿ 3 ಜಿಲ್ಲೆಗಳನ್ನಾಗಿ ಮಾಡಿ ಜಮಖಂಡಿಯನ್ನು ಕೈಬಿಟ್ಟು ನಮಗೆ ಸರ್ಕಾರದಿಂದ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ.

ಜಮಖಂಡಿ ತಾಲೂಕಿನ ಮಧ್ಯ ಭಾಗದಲ್ಲಿ ಕೃಷ್ಣಾ ನದಿ ಹರಿದಿದ್ದು ಆ ಭಾಗದ 22 ಗ್ರಾಮಗಳಿಗೆ ಆಡಳಿತ ಸರಳೀಕರಣಗೊಳಿಸುವ ದೃಷ್ಟಿಯಿಂದ ಸಾವಳಗಿಯನ್ನು ತಾಲೂಕು ಕೇಂದ್ರವಾಗಿ ಘೋಷಿಸುವುದು ಇಂದು ಅತ್ಯವಶ್ಯಕವಾಗಿದೆ. ಜಮಖಂಡಿ ಜಿಲ್ಲೆ ಹಾಗೂ ಸಾವಳಗಿ ತಾಲೂಕು ಘೋಷಿಸಲು ಒತ್ತಾಯಿಸಿ ಸರ್ಕಾರದ ಗಮನ ಸೆಳೆಯಲು ಈ ಮೊದಲು ಸದನದಲ್ಲಿ ಪ್ರಸ್ಥಾಪಿಸಿದ್ದೇನೆ ಎಂದು ತಿಳಿಸಿದ್ದಾರೆ.

ಮಾಜಿ ಉಪರಾಷ್ಟ್ರಪತಿ ದಿ.ಬಿ.ಡಿ. ಜತ್ತಿ ಹಾಗೂ ಇನ್‌ಫೋಸಿಸ್‌ನ ಸುಧಾ ಮೂರ್ತಿ ಅವರ ಜನ್ಮಸ್ಥಾನ ಹಾಗೂ ಅರ್ಹತೆ ಪಡೆದಿರುವ ಸಾವಳಗಿಯನ್ನು ತಾಲೂಕು ಅಂತಾ ಸರ್ಕಾರ ತಕ್ಷಣ ಘೋಷಿಸಬೇಕು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಾರ್ವಜನಿಕವಾಗಿ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸಿದ ಸಾರ್ವಜನಿಕರಿಗೆ ಭರವಸೆಯನ್ನು ಕೊಟ್ಟು ಚುನಾವಣೆ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಹಾಗೂ ಸಂಸ್ಥಾನ ವಿಲೀನಿಕರಣದಲ್ಲಿ ಅಗ್ರಸ್ಥಾನದಲ್ಲಿದ್ದ ಜಮಖಂಡಿಯ ದಿ.ಪಟವರ್ಧನ ಮಹಾರಾಜರ ಕನಸನ್ನು ನನಸಾಗಿಸಬೇಕೆಂದು ಒತ್ತಾಯಿಸಿ ಮಾಜಿ ಶಾಸಕರು ವಿನಂತಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net