

ಜಮಖಂಡಿ: ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎಗೆ ಸೇರಿಸುವಂತೆ ಒತ್ತಾಯಿಸಿ ತಾಲೂಕಿನ ಪಂಚಮಸಾಲಿ ಸಮುದಾಯ ಬಾಂಧವರು ಗ್ರೇಡ್-2 ತಹಸೀಲ್ದಾರ್ ಎ.ಕೆ. ಇಂಡಿಕರ್ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ಬೆಳಗ್ಗೆ ಸಮಾಜದ ಮಹಿಳಾ ಘಟಕ, ಯುವ ಘಟಕ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಮಿನಿ ವಿಧಾನಸೌಧಕ್ಕೆ ತೆರಳಿ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ 86 ಲಕ್ಷ ಪಂಚಮಸಾಲಿ ಸಮುದಾಯ ಜನರಿದ್ದು, ಕೃಷಿಯನ್ನೇ ಮೂಲ ಕಸುಬನ್ನಾಗಿ ರೂಢಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಜನಸಂಖ್ಯೆಯಲ್ಲಿ ದೊಡ್ಡದಾದರೂ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಕೃಷಿಯನ್ನೇ ಕುಲಕಾಯಕವನ್ನಾಗಿಸಿಕೊಂಡಿರುವ ಈ ಸಮಾಜ ಅತಿವೃಷ್ಟಿ, ಅನಾವೃಷ್ಟಿ ಹಾಗೂ ಹವಾಮಾನ ವೈಪರಿತ್ಯದಿಂದಾಗಿ ಬೆಳೆ ಹಾಗೂ ಸೂಕ್ತ ಬೆಲೆ ಸಿಗದೆ ಸಂಕಷ್ಟಕ್ಕೀಡಾಗುತ್ತಾರೆ.
ಈಗಾಗಲೇ ಅನೇಕ ಸಮಾಜಗಳಿಗೆ 2ಎ ಮೀಸಲಾತಿಯನ್ನು ನೀಡಲಾಗಿದೆ. ಆದರೆ, ಬಹುಸಂಖ್ಯಾತರಿರುವ ಪಂಚಮಸಾಲಿ ಸಮುದಾಯಕ್ಕೆ ಸರ್ಕಾರದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಎರಡು ದಶಕಗಳಿಂದ ಸಮುದಾಯವನ್ನು 2ಎಗೆ ಸೇರಿಸುವಂತೆ ಸಮುದಾಯದ ಜನಪ್ರತಿನಿಧಿಗಳು ಎಲ್ಲ ಸರ್ಕಾರಗಳನ್ನು ಒತ್ತಾಯಿಸುತ್ತ ಬಂದಿದ್ದರೂ ಯಾವ ಸರ್ಕಾರವೂ ಸ್ಪಂದಿಸಿಲ್ಲ. ಕೂಡಲೇ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎಗೆ ಸೇರಿಸಬೇಕೆಂದು ಸಮುದಾಯದ ಜನ ಆಗ್ರಹಿಸಿ ಮನವಿ ಸಲ್ಲಿಸಿದರು.
ಅಪ್ಪಾಸಾಬ ಚೌಗಲಾ, ಮಹಾದೇವ ಇಟ್ಟಿ, ಆರ.ಎಸ್. ಬಿರಾದಾರ, ಬಸವರಾಜ ಬಳಗಾರ, ಕಾಡು ಗಡಾದ, ಶ್ರೀಶೈಲ ಗಡಾದ, ಸಂತಿ, ಸಿದ್ದರಾಮ ದೇಸಾಯಿ, ಮಹಾನಂದಾ ಜನವಾಡ, ಸುನೀತಾ ಬಳಗಾರ, ರಾಜೇಶ್ವರಿ ಚೌಗಲಾ, ಚಂದ್ರಕಲಾ ತುಪ್ಪದ, ಗಂಗೂಬಾಯಿ ಮುಧೋಳ, ಶಶಿಕಲಾ ಬಿರಾದಾರ, ಮಹಾದೇವಿ ಜಕ್ಕಪ್ಪನವರ, ಕವಿತಾ ಕೊಣ್ಣೂರ, ಭಾರತಿ ಹಾಲಳ್ಳಿ, ಕಸ್ತೂರಿ ಆಲೂರ ಸೇರಿ ಮತ್ತಿತರರು ಇದ್ದರು.