

ಜಮಖಂಡಿ: ನಗರದ ನಗರಸಭೆ ಕಾಂಗ್ರೆಸ್ ಪಾಲಾಯಿತು. ಕಾಂಗ್ರೆಸ್‌ನ ಸಿದ್ದು ಮೀಶಿ ಅಧ್ಯಕ್ಷರಾಗಿ, ಮಲ್ಲವ್ವ ಪಾಯಗೊಂಡ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸಿದ್ದು ಮೀಶಿ, ಬಿಜೆಪಿಯಿಂದ ಕುಶಾಲ ವಾಘ್ಮೋರೆ, ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಮಲ್ಲವ್ವ ಪಾಯಗೊಂಡ, ಬಿಜೆಪಿಯಿಂದ ಮಹಾನಂದಾ ಕಲೂತಿ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್‌ನ ಅಭ್ಯರ್ಥಿಗಳು ಶಾಸಕ ಆನಂದ ನ್ಯಾಮಗೌಡ, ಮೂವರು ಪಕ್ಷೇತರ ಸದಸ್ಯರು, 20 ಕಾಂಗ್ರೆಸ್ ಸದಸ್ಯರು ಸೇರಿ ಒಟ್ಟು 24 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಬಿಜೆಪಿ ಅಭ್ಯರ್ಥಿಗಳು 7 ಬಿಜೆಪಿ, ಓರ್ವ ಪಕ್ಷೇತರ ಸದಸ್ಯ ಸೇರಿ 8 ಮತಗಳನ್ನು ಪಡೆದರು ಎಂದು ಚುನಾವಣಾಧಿಕಾರಿ ಎಸಿ ಡಾ.ಸಿದ್ದು ಹುಲ್ಲೋಳ್ಳಿ ತಿಳಿಸಿದರು.
ತಹಸೀಲ್ದಾರ್ ಸಂಜಯ ಇಂಗಳೆ, ಎಸಿ ಕಚೇರಿಯ ಗ್ರೇಡ್-2 ತಹಸೀಲ್ದಾರ್ ಎಸ್.ಎಂ. ಛಲವಾದಿ, ಗ್ರೇಡ್-2 ತಹಸೀಲ್ದಾರ್ ಎ.ಕೆ.ಇಂಡಿಕರ, ಪೌರಾಯುಕ್ತ ರಾಮಕೃಷ್ಣ ಸಿದ್ದನಕೊಳ್ಳ ಚುನಾವಣೆ ಸಹಾಯಕರಾಗಿ ಕಾರ್ಯನಿರ್ವಹಿಸಿದರು.
ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಗುಲಾಲು ಎರಚಿ ಸಂಭ್ರಮಿಸಿದರು. ನಗರಸಭೆಯಿಂದ ದೇಸಾಯಿ ವೃತ್ತದವರೆಗೆ ತೆರೆದ ವಾಹನದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಭವ್ಯ ಮೆರವಣಿಗೆ ಮಾಡಲಾಯಿತು.
ಅಭಿವೃದ್ಧಿಗೆ ಒತ್ತು
ಜಮಖಂಡಿ ನಗರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಜತೆಗೆ ಶಾಸಕರ ಮಾರ್ಗದರ್ಶನದಲ್ಲಿ ನಗರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ನೂತನ ಅಧ್ಯಕ್ಷ ಸಿದ್ದು ಮೀಶಿ ತಿಳಿಸಿದರು.
ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ದಿ.ಸಿದ್ದು ನ್ಯಾಮಗೌಡ ನೇತೃತ್ವದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆ ನಿಟ್ಟಿನಲ್ಲಿ ಜಮಖಂಡಿ ಮಾದರಿ ನಗರವನ್ನಾಗಿ ರೂಪಿಸಲಾಗುವುದು ಎಂದರು.
ಕುತೂಹಲಕ್ಕೆ ತೆರೆ
ಮೀಸಲಾತಿ ಪ್ರಕಟವಾದಾಗಿನಿಂದ ಜಮಖಂಡಿ ನಗರಸಭೆ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬುದು ತೀವ್ರ ಕುತೂಹಲ ಕೆರೆಳಿಸಿತ್ತು. ದಾನೇಶ ಘಾಟಗೆ, ಸಿದ್ದು ಮೀಶಿ ನಡುವೆ ಭಾರಿ ಪೈಪೋಟಿ ಎದುರಾಗಿತ್ತು. ಕಾಂಗ್ರೆಸ್ ಮುಖಂಡರು, ಶಾಸಕರು ಸಾಕಷ್ಟು ಸಭೆಗಳನ್ನು ನಡೆಸಿ ತಲಾ 15 ತಿಂಗಳು ಅಧಿಕಾರ ಹಂಚಿಕೆಗೆ ಒಪ್ಪಿಗೆ ಸೂಚಿಸಿದರು. ಮೊದಲ ಅವಧಿಗೆ ಸಿದ್ದು ಮೀಶಿ ಅಧ್ಯಕ್ಷರಾಗಿ ಅಧಿಕಾರ ಪಡೆದರು.
EndFragment