ಗ್ರಾಮಸ್ಥರ ಸಹಕಾರದಿಂದ ಕಾಲೇಜು ಬೆಳವಣಿಗೆ

JKD-11-HNR
Published on

ಜಮಖಂಡಿ: ನಿರಂತರ ಪ್ರಯತ್ನದಿಂದ ಗುರಿ ಸಾಧನೆ ಸಾಧ್ಯ ಎಂದು ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತರಾಗಿರುವ ಹುನ್ನೂರು ಸರ್ಕಾರಿ ಪಿಯು ಕಾಲೇಜಿನ ಬಸವರಾಜ ನರವಾಡೆ ಅವರು ಹೇಳಿದರು.

ತಾಲೂಕಿನ ಹುನ್ನೂರು ಗ್ರಾಮಾಭಿವೃದ್ಧಿ ನಾಗರಿಕ ವೇದಿಕೆ ಅಧ್ಯಕ್ಷರಾಗಿದ್ದ ಸಮಾಜ ಸೇವಕ ಪ್ರಕಾಶ ಹಳೇಮನಿ ಅವರ ಪುಣ್ಯಸ್ಮರಣೆ ನಿಮಿತ್ತ ಬುಧವಾರ ಹೂವಿನೂರ ಸಿದ್ಧ ಸರೋವರದ ವಾಯವಿಹಾರ ಪಥದಲ್ಲಿ ಪರಿಸರ ಪ್ರಿಯರು ಹಮ್ಮಿಕೊಂಡಿದ್ದ ಸ್ವಚ್ಛತೆಗಾಗಿ ಶ್ರಮದಾನ ಹಾಗೂ ಸಾಧಕರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿ, ಹುನ್ನೂರಿನಲ್ಲಿ ಶೈಕ್ಷಣಿಕ ವಾತಾವರಣ ಉತ್ತಮವಾಗಿದೆ. ಸರ್ಕಾರಿ ಶಾಲೆ ಕಾಲೇಜುಗಳ ಬೆಳವಣಿಗೆಗೆ ಗ್ರಾಮಸ್ಥರು ಸಹಕಾರ ನೀಡುತ್ತಿದ್ದು, ಹೀಗಾಗಿ ಇಲ್ಲಿಯ ಪಿಯು ಕಾಲೇಜು ರಾಜ್ಯಮಟ್ಟದಲ್ಲೂ ಹೆಸರು ಮಾಡುವಂತಾಗಿದೆ ಎಂದು ಬಣ್ಣಿಸಿದರು.

ತಾಲೂಕು ಪಂಚಾಯಿತಿ ಸದಸ್ಯ ಬಸಪ್ಪ ಕಡಪಟ್ಟಿ ಮಾತನಾಡಿ, ಸಮಾಜ ಸೇವಕ ಪ್ರಕಾಶ ಹಳೇಮನಿ ಅವರು ಗ್ರಾಮದ ಅಭಿವೃದ್ಧಿ ಬಗ್ಗೆ ಕಳಕಳಿ ಹೊಂದಿದ್ದರು ಎಂದರು. ಅಧ್ಯಕ್ಷತೆ ವಹಿಸಿದ್ದ ಮನೀಷ ಹಳೇಮನಿ ಮಾತನಾಡಿ, ಯುವಕರು ಕೈಗೊಳ್ಳುವ ಸಾಮಾಜಿಕ ಕಾರ್ಯಗಳಿಗೆ ತಾವು ಕೂಡ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಐ.ಎಸ್.ಹನಗಂಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಒಂದು ಸಂಘಟನೆ ಮೂಲಕ ಪ್ರಕಾಶ ಹಳೇಮನಿ ಅವರು ಗ್ರಾಮದ ಅಭಿವೃದ್ಧಿಗೆ ಸರ್ಕಾರದಿಂದ ದೊರಕಿಸಿದ ಸೌಲಭ್ಯಗಳ ಬಗ್ಗೆ ಸ್ಮರಿಸಿದರು. ನಾವೆಲ್ಲರೂ ಸೇರಿ ಸಾಮಾಜಿಕ ಕಾರ್ಯಗಳೊಂದಿಗೆ ಅವರ ಪುಣ್ಯಸ್ಮರಣೆ ಮಾಡುತ್ತಿರುವುದು ಒಂದು ಉತ್ತಮ ಕಾರ್ಯವಾಗಿದೆ ಎಂದರು.

ರಾಜ್ಯಮಟ್ಟದ ಉತ್ತಮ ಉಪನ್ಯಾಸಕ ಪ್ರಶಸ್ತಿ ಪುರಸ್ಕೃತ ಬಸವರಾಜ ನರವಾಡೆ, ಕರೊನಾ ತಡೆಗೆ ಉತ್ತಮವಾಗಿ ಕಾರ್ಯನಿರ್ವಹಿಸಿ ಜಿಲ್ಲಾಡಳಿತದ ಪ್ರಶಸ್ತಿಗೆ ಪಾತ್ರರಾಗಿರುವ ಆಶಾ ಸುಗಮಕಾರ ಕಲಾವತಿ ಕೊಣ್ಣೂರ ಅವರನ್ನು ಸನ್ಮಾನಿಸಲಾಯಿತು. ಪಿಡಿಒ ಕುತುಬುದ್ದೀನ್ ಖೀಜಿ, ಆರೋಗ್ಯ ಮತ್ತು ಸ್ವಾಸ್ಥೃ ಕೇಂದ್ರದ ವೈದ್ಯ ಮಂಜುನಾಥ ಶಿವನಾಕರ, ಕಿರಿಯ ಆರೋಗ್ಯ ಸಹಾಯಕಿ ಲಕ್ಷ್ಮೀಬಾಯಿ ಜಾಧವ, ಆಶಾ ಕಾರ್ಯಕರ್ತೆ ಮಹಾದೇವಿ ಕಕ್ಕಮರಿ ಇದ್ದರು. ಶಿಕ್ಷಕ ಸಂಗಮೇಶ ಉಟಗಿ ಸ್ವಾಗತಿಸಿ, ನಿರೂಪಿಸಿದರು. ಕಾರ್ಯಕ್ರಮಕ್ಕೂ ಮೊದಲು ಒಂದು ಗಂಟೆಗೂ ಅಧಿಕ ಕೆರೆ ಸುತ್ತಲಿನ ಜಾಗ ಹಾಗೂ ನೀರಲ್ಲಿದ್ದ ಕಸಕಡ್ಡಿಯನ್ನು ಪರಿಸರ ಪ್ರಿಯರು ಹಾಗೂ ಪೌರ ಕಾರ್ಮಿಕರು ಸ್ವಚ್ಛಗೊಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net