

ಜಮಖಂಡಿ: ಮನುಷ್ಯ ದೈಹಿಕ ಹಾಗೂ ಮಾನಸಿಕವಾಗಿ ಬೆಳವಣಿಗೆಯಾಗಲು ಆರೋಗ್ಯ ಮತ್ತು ಶಿಕ್ಷಣ ಮುಖ್ಯವಾಗಿದೆ. ದೈಹಿಕ ಸದೃಢತೆಗೆ ಅಗತ್ಯ ಪೌಷ್ಟಿಕಾಂಶಗಳ ಆಹಾರ ಸೇವನೆ ಮಾಡಬೇಕು ಎಂದು ತಾಪಂ ಇಒ ಅಭೀದ ಗದ್ಯಾಳ ಹೇಳಿದರು.
ನಗರದ ಸೀಶಕ್ತಿ ಭವನದಲ್ಲಿ ತಾಪಂ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ಸೋಮವಾರ ಏರ್ಪಡಿಸಿದ್ದ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಗನವಾಡಿ ಕೇಂದ್ರ ಮತ್ತು ಗರ್ಭಿಣಿಯರ ಮನೆ ಆವರಣದಲ್ಲಿ ಜಾಗವಿದ್ದರೆ ಪೌಷ್ಟಿಕ ಬೆಳೆಗಳ ತೋಟ ನಿರ್ಮಾಣ ಮಾಡಲು ಗ್ರಾಪಂ ವತಿಯಿಂದ ಅನುಕೂಲ ಕಲ್ಪಿಸಿ ಕೊಡಲಾಗುವುದು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಜಿ.ಎಸ್. ಗಲಗಲಿ ಮಾತನಾಡಿ, ಮಾನಸಿಕ ನೆಮ್ಮದಿ, ಒಳ್ಳೆಯ ವಾತಾವರಣ ಹಾಗೂ ಉತ್ತಮ ಪೌಷ್ಟಿಕಾಂಶವುಳ್ಳ ಆಹಾರ ಪದಾರ್ಥ ಸೇವನೆ ಮಾಡಿದರೆ ತಾಯಿ-ಮಗು ಆರೋಗ್ಯದಿಂದಿರಲು ಸಾಧ್ಯ. ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ತಾಯಿಯ ಹಾಲು ಮಗುವಿನ ಆರೋಗ್ಯ ವೃದ್ಧಿಸಲು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಆರೋಗ್ಯ ಇಲಾಖೆ ಅಧಿಕಾರಿ ಎಂ.ಎಂ. ಕಡ್ಲಿಮಟ್ಟಿ ಮಾತನಾಡಿ, ಆಯೋಡಿನ್ ಇರುವ ಉಪ್ಪನ್ನು ಬಳಸಬೇಕು. ಇದರಿಂದ ಗಳಗಂಡ ರೋಗ ತಡೆಗಟ್ಟಬಹುದು ಎಂದು ಹೇಳಿದರು.
ಸಿಡಿಪಿಒ ಅನುರಾಧಾ ಹಾದಿಮನಿ ಮಾತನಾಡಿದರು. ರಾಧಿಕಾ ಶಿವರಾಜ ಜಮಾದಾರ ಎಂಬ ಗರ್ಭಿಣಿಗೆ ಸೀಮಂತ ಕಾರ್ಯಕ್ರಮ ಜರುಗಿತು. ತಾಪಂ ಅಧ್ಯಕ್ಷೆ ಸವಿತಾ ಕಲ್ಯಾಣಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ಸುಂದ್ರವ್ವ ಬೆಳಗಲಿ, ಎಸಿಡಿಪಿಒ ಆನಂದ ಸಿ. ಇದ್ದರು.
ಲಕ್ಷ್ಮೀ ಶಿರಗುಪ್ಪಿ ಪ್ರಾರ್ಥಿಸಿದರು. ಮೇಲ್ವಿಚಾರಕಿ ಆರ್.ಎಚ್. ತಿಮ್ಮಾಪುರ ನಿರೂಪಿಸಿದರು. ಮೇಲ್ವಿಚಾರಕಿ ಎಸ್.ಎಸ್. ಮಡಿವಾಳರ ವಂದಿಸಿದರು.
EndFragment