

ಮಂಡ್ಯ: ಮಳವಳ್ಳಿ ತಾಲೂಕಿನಲ್ಲಿ ಗಗನಚುಕ್ಕಿ ಜಲಪಾತೋತ್ಸವವನ್ನು ಸೆ.13 ಹಾಗೂ 14 ರಂದು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಲಪಾತೋತ್ಸವದ ಲೋಗೋ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗಗನಚುಕ್ಕಿ ಜಲಪಾತವನ್ನು ಉನ್ನತ ಪ್ರವಾಸಿ ತಾಣ ಮಾಡಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು 2 ದಿನದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಾಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.
ರೊಟ್ಟಿಕಟ್ಟೆಯ ಬಳಿ ನೀರು ಸರಬರಾಜು ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಈ ಬಾರಿ ಮಲ್ಲಿಕ್ಯಾತನಹಳ್ಳಿಯ ಬಳಿ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ವೇದಿಕೆಯ ಬಳಿ ಜಲಪಾತದ ಮನಮೋಹಕ ದೃಶ್ಯಗಳನ್ನು ಸವಿಯಲು ಎಲ್.ಇ.ಡಿ ವ್ಯವಸ್ಥೆ ಸಹ ಮಾಡಲಾಗುವುದು. ಪ್ರವಾಸಿಗರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ಸುಗಮ ವಾಹನ ಸಂಚಾರದ ದೃಷ್ಟಿಯಿಂದ ಮಳವಳ್ಳಿ ತಾಲೂಕಿನಿಂದ ಗಗನಚುಕ್ಕಿವರೆಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಜಲಪಾತೋತ್ಸವ ನಡೆಯುವ ಎರಡು ದಿನ ಆಗಮಿಸುವ ಸಾರ್ವಜನಿಕರಿಗೆ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಉಚಿತವಾಗಿ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಜಲಪಾತ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗುವ ರೀತಿ ಕುಳಿತಿಕೊಂಡು ವೀಕ್ಷಿಸಲು ಮೆಟ್ಟಿಲು, ಲೈಟಿಂಗ್ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಕ್ವಾ ಪಾರ್ಕ್ ಅಭಿವೃದ್ಧಿಪಡಿಸಲು ಚಿಂತಿಸಲಾಗುತ್ತಿದೆ. ಇದಲ್ಲದೆ ಪಿ.ಪಿ.ಪಿ ಮಾಡಲ್ನಲ್ಲಿ ಉದ್ಯಾನವನ, ಜಲಕ್ರೀಡೆ ಮಾಡಲು ಸಹ ಯೋಜಿಸಲಾಗುತ್ತಿದೆ. ಎರಡು ದಿನದ ಕಾರ್ಯಕ್ರಮದಲ್ಲಿ ಬೆಳಗ್ಗೆ 11 ರಿಂದ 3 ಗಂಟೆಯವರೆಗೆ ಸ್ಥಳೀಯ ಕಲಾವಿದರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರೊಂದಿಗೆ ಜಿಲ್ಲೆಯ 2 ಅಥವಾ 3 ಶಾಲಾ/ ಕಾಲೇಜು ವಿದ್ಯಾರ್ಥಿಗಳಿಗೆ ಪ್ರದರ್ಶನ ನೀಡಲು ಅವಕಾಶ ನೀಡಲಾಗುವುದು ಎಂದು ವಿವರಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ಎಸ್.ಎಚ್.ನಿರ್ಮಲಾ ಉಪಸ್ಥಿತರಿದ್ದರು.
ಜಲಪಾತೋತ್ಸವ ಕಾರ್ಯಕ್ರಮಗಳಿವು
ಸೆ.13ರಂದು ಬೆಳಗ್ಗೆ 11ಗಂಟೆಯಿಂದ ಮಧ್ಯಾಹ್ನ 3ರವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ. 3ರಿಂದ ಸಂಜೆ 6ಗಂಟೆವರೆಗೆ ಸಾದ್ವಿನಿ ಕೊಪ್ಪ, ಸಾಕ್ಷಿ ಕೊಲ್ಲೂರು, ಹನುಮಂತ ಹಾಗೂ ಕಂಬದ ರಂಗಯ್ಯ ಗಾಯಕರಿಂದ ಜಾನಪದ ಸಂಗೀತ ಕಾರ್ಯಕ್ರಮ, 6ಗಂಟೆಗೆ ಶಿವರಾಜ್ ಕೆ.ಆರ್.ಪೇಟೆ ಮತ್ತು ಅವರ ತಂಡದ ವತಿಯಿಂದ ಕಾಮಿಡಿ ಶೋ ಕಾರ್ಯಕ್ರಮ. 6.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಾತ್ರಿ 7.30 ರಿಂದ ರಾತ್ರಿ 11ರವರೆಗೆ ಅರ್ಜುನ್ ಜನ್ಯಾ ಮತ್ತು ಅವರ ತಂಡದಿಂದ ಹಾಗೂ ಖ್ಯಾತ ಗಾಯಕಿ ಮಂಗಲಿ ಅವರಿಂದ ಸಂಗೀತ ಕಾರ್ಯಕ್ರಮ, ಚಲನಚಿತ್ರ ನಟಿಯರಾದ ರಾಗಿಣಿ ತ್ರಿವೇದಿ, ಮನ್ವಿತಾ ಹರೀಶ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ್ ಅವರು ಪಾಲ್ಗೊಳ್ಳಲಿದ್ದಾರೆ.
14ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3ಗಂಟೆಯವರೆಗೆ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, 3 ಗಂಟೆಯಿಂದ ಸಂಜೆ 4.30ರವರೆಗೆ ಸವಿತಕ್ಕ, ರವಿ ಮೂರೂರು, ಶ್ರೀಹರ್ಷ ಹಾಗೂ ಮಲ್ಲಿಕಾರ್ಜುನ ಕೆಂಕೆರೆ ತಂಡದಿಂದ ಜಾನಪದ ಸಂಗೀತ ಕಾರ್ಯಕ್ರಮ, 4.30 ರಿಂದ 6ಗಂಟೆಯವರೆಗೆ ಬೆಂಗಳೂರಿನ ಕಲಾವಿದರಿಂದ ಮ್ಯೂಸಿಕ್, 6ಗಂಟೆಯಿಂದ 7ರವರೆಗೆ ಗಂಗಾವತಿ ಪ್ರಾಣೇಶ್ ಮತ್ತು ತಂಡದಿಂದ ಕಾಮಿಡಿ ಶೋ, 7ಗಂಟೆಯಿಂದ 7.30ರವರೆಗೆ ಸಮಾರೋಪ, 7.30 ರಿಂದ 11ಗಂಟೆವರೆಗೆ ಗುರುಕಿರಣ್ ಹಾಗೂ ತಂಡದಿಂದ ಸಂಗೀತ ಕಾರ್ಯಕ್ರಮದ ಆಯೋಜಿಸಿದ್ದು, ಸಿನಿಮಾ ನಟಿಯರಾದ ಹರ್ಷಿಕಾ ಪೂಣಚ್ಚ ಮತ್ತು ಭಾವನಾ ನೃತ್ಯ ಪ್ರದರ್ಶಿಸಲಿದ್ದಾರೆ. 14ರಂದು ಖ್ಯಾತ ಚಲನಚಿತ್ರ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಪಾಲ್ಗೊಳ್ಳಲಿದ್ದಾರೆ. ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಕಾರ್ಯಕ್ರಮಗಳ ವಿವಿಧ ಮಳಿಗೆಗಳನ್ನು ಪ್ರದರ್ಶಿಸಲಾಗುವುದು. ಲೇಸರ್ ಲೈಟ್ ಶೋ, ಸೌಂಡ್ ಆ್ಯಂಡ್ ಲೈಟ್ಸ್‌ಗಳನ್ನು ಸಹ ಕಾರ್ಯಕ್ರಮದಲ್ಲಿ ಆಯೋಜಿಸಲಾಗಿದೆ.