ಮಳೆ ಬಂದರಷ್ಟೇ ನೀರು, ಇಲ್ಲದಿರೆ ಬರೀ ಕಣ್ಣೀರು

hrr
Published on

ಹರಿಹರ: ಮಧ್ಯಕರ್ನಾಟಕದ ಕೇಂದ್ರಬಿಂದು ಹರಿಹರದಲ್ಲಿರುವ ತುಂಗಭದ್ರೆ ಬಹುತೇಕ ಬತ್ತಿದ್ದು, ಇನ್ನೆರೆಡು ದಿನಗಳಲ್ಲಿ ನಗರಕ್ಕೆ ಮತ್ತೆ ಜಲಕಂಟಕ ಎದುರಾಗಲಿದೆ.

ಮಳೆ ಬಂದರೆ ಮಾತ್ರ ನೀರು, ಇಲ್ಲದಿದ್ದರೆ ಬರೀ ಕಣ್ಣೀರು ಎನ್ನುವಂತಹ ಸ್ಥಿತಿ ಬಂದೊದಗಿದೆ. ಭದ್ರಾ ಡ್ಯಾಂನಿಂದ ಬಿಡುಗಡೆ ಮಾಡಿದ ನೀರನ್ನು ಏ. 6ರಂದು ಬಂದ್ ಮಾಡಿದ್ದರಿಂದ ನೀರಿನ ಹರಿವು ಸಂಪೂರ್ಣ ಕಡಿಮೆಯಾಗಿದೆ.

ನಗರಕ್ಕೆ ಕವಲೆತ್ತು ಜಾಕ್‌ವೆಲ್‌ನಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ, ನೀರಿನ ಹರಿವು ಕಡಿಮೆಯಾದ ಪರಿಣಾಮ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ. 22 ಕೆರೆಯ ಬ್ಯಾರೇಜ್ ಬಳಿ ಜೆಸಿಬಿ ಸಹಾಯದಿಂದ ತತ್ಕಾಲಿಕ ಗುಂಡಿ ತೆಗೆದು ನೀರಿನ ಸಂಗ್ರಹಿಸಿ ಸರಬರಾಜು ಮಾಡಲು ಅಧಿಕಾರಿಗಳು ಪ್ರಯತ್ನ ಮಾಡುತ್ತಿದ್ದರೂ ಅದು ಇನ್ನು ಎರಡ್ಮೂರು ದಿನಗಳಿಗೆ ಮಾತ್ರ ಸಾಧ್ಯ.

ತುಂಗಭದ್ರಾ ನದಿಯಿಂದ ದಾವಣಗೆರೆ, ಚಿತ್ರದುರ್ಗ ಮತ್ತು ಜಗಳೂರಿನ ವಿವಿಧ ಕೆರೆ ತುಂಬಿಸಿದ್ದು, ಈ ಭಾಗದಲ್ಲಿ ನೀರಿನ ತೀವ್ರತೆ ಕಡಿಮೆಯಾಗಿದೆ. ಆದರೆ, ಹರಿಹರಕ್ಕೆ ನೀರು ಶೇಖರಣಾ ಘಟಕ ಇಲ್ಲದಿರುವುದೇ ಈ ಬಿಕ್ಕಟ್ಟಿಗೆ ಕಾರಣ. ಜತೆಗೆ, ನದಿ ಪಕ್ಕದಲ್ಲಿದೆ. ಹಾಗಾಗಿ, ನಮಗೆ ನೀರಿನ ಸಮಸ್ಯೆ ಇಲ್ಲ ಎನ್ನುವ ಅತಿಯಾದ ಆತ್ಮವಿಶ್ವಾಸ ಇಂದು ಮುಳುವಾಗಿದೆ.

ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ನಗರಸಭಾ ಸದಸ್ಯರು ಹರಿಹರಕ್ಕೆ ಶಾಶ್ವತ ನೀರಿನ ಶೇಖರಣಾ ಘಟಕದ (ಕೆರೆ)ನಿರ್ಮಾಣ ಮಾಡುವ ಚಿಂತನೆ ಮಾಡಬೇಕಿದೆ ಎನ್ನುತ್ತಾರೆ ಹರಿಹರದ ಪ್ರಜ್ಞಾವಂತರು.

ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಕಡಿಮೆಯಾಗಿದೆ. ಮುಂದಿನ ಮೂರು ದಿನಗಳು ಮಾತ್ರ ನಲ್ಲಿ ನೀರು ನೀಡಲು ಸಾಧ್ಯ. ಆದ್ದರಿಂದ ನಾಗರಿಕರು ನೀರನ್ನು ಬಿಟ್ಟ ಸಮಯದಲ್ಲಿ ಶೇಖರಣೆ ಮಾಡಿ ಮಿತವಾಗಿ ಬಳಸುವುದು ಉತ್ತಮ. ಮಳೆ ಬಂದರೆ ಎಲ್ಲವೂ ಸರಿಯಾಗಲಿದೆ.
-ಐಗೂರು ಬಸವರಾಜ್, ಪೌರಾಯುಕ್ತರು ನಗರಸಭೆ ಹರಿಹರ.

ಹರಿಹರ ನಗರ ದಿನದಿಂದ ದಿನಕ್ಕೆ ತೀವ್ರಗತಿಯಲ್ಲಿ ಬೆಳೆಯುತ್ತಿದೆ. ಇದಕ್ಕೆ ತಕ್ಕಂತೆ ಮೂಲಸೌಕರ್ಯ ನೀಡುವ ಬಗ್ಗೆ ಸ್ಥಳೀಯ ಆಡಳಿತ ಚಿಂತನೆ ಮಾಡಬೇಕು. ಆದರೆ, ಈ ವಿಚಾರದಲ್ಲಿ ಆಧಿಕಾರಿಗಳು ತಮ್ಮ ಜವಾಬ್ದಾರಿ ಮರೆತ ಪರಿಣಾಮ ನಗರದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.
-ಜಿ. ಪ್ರವೀಣ್ ಜಿ. ಪವಾರ್ಸ್ಥ, ಳೀಯ ನಿವಾಸಿ ಹರಿಹರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net