

ಗೋಣಿಕೊಪ್ಪ: ಪೊನ್ನಂಪೇಟೆ ತಾಲೂಕು ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಗೊಂಡಿದ್ದರೂ ಜನರಿಗೆ ಯೋಜನೆಯ ಪ್ರಯೋಜನ ಮಾತ್ರ ಸಂಪೂರ್ಣವಾಗಿ ದೊರೆತಿಲ್ಲ.
ಟಿ.ಶೆಟ್ಟಿಗೇರಿ ವ್ಯಾಪ್ತಿಯ ಸುಮಾರು 300 ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಸುಮಾರು 1 ಕೋಟಿ ರೂ.ವೆಚ್ಚದ ಯೋಜನೆಗೆ 2021ರಲ್ಲಿ ಚಾಲನೆ ನೀಡಲಾಗಿತ್ತು. 2022ರಲ್ಲಿ ಕಾಮಗಾರಿ ಪೂರ್ಣಗೊಂಡಿತು. ಗ್ರಾಮಕ್ಕೆ ನೀರು ಪೂರೈಸಲು ಬೋರ್‌ವೆಲ್ ಕೊರೆದು 20 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ಅನ್ನು ಕೂಡ ನಿರ್ಮಿಸಲಾಗಿದೆ. ಆದರೆ ಬಹುತೇಕ ಮನೆಗಳಿಗೆ ನಲ್ಲಿ ಸಂಪರ್ಕ ನೀಡದ ಕಾರಣ ಜನರು ಯೋಜನೆಯಿಂದ ವಂಚಿತರಾಗಿದ್ದಾರೆ.
ಇಷ್ಟು ದೊಡ್ಡ ಪ್ರಮಾಣದ ಯೋಜನೆ ಇದಾಗಿದ್ದರೂ ನೀರಿನ ಮೂಲ ಮಾತ್ರ ಚಿಕ್ಕದ್ದಾಗಿದೆ. ಇಷ್ಟು ಮನೆಗಳಿಗೂ ನೀರು ಪೂರೈಸಲು ಇರುವ ನೀರಿನ ಮೂಲ ಕೇವಲ ಒಂದೂವರೆ ಇಂಚು ನೀರಿರುವ ಬೋರ್‌ವೆಲ್. ಟ್ಯಾಂಕ್ ತುಂಬಲು ಬಹಳಷ್ಟು ಸಮಯ ಬೇಕು. ಇದರಿಂದ ಟ್ಯಾಂಕ್ ತುಂಬಿ ಅಲ್ಲಿಂದ ಫಲಾನುಭವಿಗಳಿಗೆ ನೀರು ಒದಗಿಸುವುದು ಕಷ್ಟದ ಮಾತು.
ಕಾಮಗಾರಿ ಬಾಕಿ ಇದೆ: ಟ್ಯಾಂಕ್ ನಿರ್ಮಿಸಿ ಬೋರ್‌ವೆಲ್ ಕೊರೆದು ಪೈಪ್‌ಲೈನ್‌ಅಳವಡಿಸಿ ಮೀಟರ್ ಹಾಕಿ ಜಲ ಜೀವನ್ ಮಿಷನ್ ಮಾಹಿತಿ ಫಲಕವನ್ನೂ ಹಾಕಿ ಆಗಿದೆ. ಆದರೆ ಕೆಲವು ಮನೆಗಳಿಗೆ ಇನ್ನೂ ನಲ್ಲಿ ಸಂಪರ್ಕ ಕಲ್ಪಿಸಿಲ್ಲ. ಹೀಗಾಗಿ ಈ ಮನೆಗಳಿಗೆ ನೀರಿನ ಸಂಪರ್ಕ ಇಲ್ಲದಂತಾಗಿದೆ.
ಒಂದು ವಾರವಷ್ಟೇ ನೀರು: ಈ ಹಿಂದೆ ಪಂಚಾಯಿತಿ ಕಡೆಯಿಂದ ಬೋರ್‌ವೆಲ್ ಕೊರೆಸಿ ಅದರ ಮೂಲಕ ನೀರು ಪೂರೈಸಲಾಗುತ್ತಿತ್ತು. ಕಾಲ ಕ್ರಮೇಣ ಆ ಬೋರ್‌ವೆಲ್ ಕೆಟ್ಟು ಹೋದ ಕಾರಣ ನೀರು ಪೂರೈಕೆ ನಿಂತಿದೆ. ಪ್ರಸ್ತುತ ಪಂಚಾಯಿತಿ ಬಾವಿಯಿಂದ ನೀರು ಪೂರೈಸಲಾಗುತ್ತಿದೆ. ಈ ಬಾರಿ ಬೇಸಿಗೆಯ ಝಳ ಹೆಚ್ಚಿರುವ ಕಾರಣ ಜಲಮೂಲಗಳು ಬತ್ತುತ್ತಿವೆ. ಬಾವಿಯೂ ಬತ್ತಿದ್ದು, ಕೇವಲ ಒಂದು ವಾರದ ಮಟ್ಟಿಗೆ ನೀರು ಪೂರೈಸಬಹುದು ಎನ್ನುತ್ತಾರೆ ಪಂಚಾಯಿತಿ ಅಧಿಕಾರಿಗಳು.
ಗ್ರಾಮದಲ್ಲಿ ಹರಿಯುವ ಲಕ್ಷ್ಮಣ ತೀರ್ಥ ನದಿಯ ನೀರನ್ನು ತೋಟಗಳಿಗೆ ಬಳಸಿದ ಪರಿಣಾಮ ಅದೂ ಬತ್ತಿದೆ. ಇನ್ನು ನಗರಗಳಂತೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದು ಕಷ್ಟದ ಮಾತು. ಹಾಗಾಗಿ ಜಲಜೀವನ್ ಮಿಷನ್‌ನ ಸಂಪರ್ಕವನ್ನು ಸರಿಯಾಗಿ ನಿರ್ವಹಿಸಿದರೆ ತಕ್ಕ ಮಟ್ಟಿಗೆ ನೀರಿನ ಅಭಾವ ಕಡಿಮೆ ಮಾಡಬಹುದು ಎಂಬುದು ಸ್ಥಳೀಯರ ಆಶಯವಾಗಿದೆ.
ನೀರು ಸಾಲುತ್ತಿಲ್ಲ: ಗ್ರಾಮದಲ್ಲಿ ಕೆಲವು ಬಡಾವಣೆ ಮತ್ತು ಹರಿಜನ ಕಾಲನಿಗಳಿವೆ. ಕಾಲನಿಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ನೀರು ಪೂರೈಕೆ ಆಗುತ್ತಿದ್ದರೂ, ತಕ್ಕ ಮಟ್ಟಿಗೆ ನೀರು ಸಾಲುತ್ತಿಲ್ಲ ಎನ್ನುವ ಆರೋಪವಿದೆ. ಇನ್ನು ಖಾಸಗಿ ತೋಟದವರು ತಮ್ಮ ಜಾಗದಲ್ಲಿಯೇ ನೀರಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮತ್ತೆ ಕೆಲವರು ದೂರದ ಊರಿನಲ್ಲಿ ನೆಲೆಸಿರುವ ಗ್ರಾಮಸ್ಥರ ಮನೆಯ ಬಾವಿಯ ನೀರನ್ನು ಅವಲಂಬಿಸಿದ್ದಾರೆ.
ಗ್ರಾಮದ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಆದರೀಗ ಇದು ಜನರ ಬಳಕೆಗೆ ನಿಲುಕದಂತಾಗಿದೆ. ಅಷ್ಟು ದೊಡ್ಡ ಟ್ಯಾಂಕ್‌ಗೆ ಕೇವಲ ಒಂದೂವರೆ ಇಂಚು ಬೋರ್‌ವೆಲ್ ನೀರು ಸಾಕಾಗದು. ಆದ್ದರಿಂದ ಇಡೀ ಗ್ರಾಮಕ್ಕೆ ನೀರು ಪೂರೈಸುವುದು ಅಸಾಧ್ಯ. ಇಂಜಿನಿಯರ್ ಬಳಿ ಮಾತನಾಡಿದರೆ ಸರಿ ಮಾಡೋಣ ಎನ್ನುವ ಭರವಸೆಯಷ್ಟೆ. ಈಗಾಗಲೇ ನೀರಿನ ಸಮಸ್ಯೆ ಪ್ರಾರಂಭವಾಗಿದೆ. ಇದನ್ನು ಯಾವಾಗ ಬಂದು ಸರಿಮಾಡುತ್ತಾರೋ ಗೊತ್ತಿಲ್ಲ.
ಮಚ್ಚಮಾಡ ಸುಮಂತ್, ಗ್ರಾಪಂ ಮಾಜಿ ಅಧ್ಯಕ್ಷ
ಮನೆ ಮನೆಗೆ ನೀರು ನೀಡುವ ಉದ್ದೇಶದಿಂದ ಎಲ್ಲ ಮನೆಗೂ ಪೈಪ್ ಅಳವಡಿಸಲಾಗಿದೆ. ಆದರೆ ನಲ್ಲಿ ಅಳವಡಿಸಿಲ್ಲ. ಗ್ರಾಮದ ಕೆಲವು ಕಾಲನಿ ಮತ್ತು ಮನೆಗಳಿಗೆ ಮಾತ್ರ ನೀರು ಸಿಗುತ್ತಿದೆ. ಅದು ಕೂಡ ಅಲ್ಪಪ್ರಮಾಣದಲ್ಲಿ. ನಮ್ಮ ಮನೆಗೆ ಪೈಪ್ ಹಾಕಲಾಗಿದೆ. ಆದರೆ ನೀರಿನ ಸಂಪರ್ಕ ನೀಡಿಲ್ಲ.
ಚಂಗುಲಂಡ ಸತೀಶ್, ಗ್ರಾಮಸ್ಥ.
ಸದ್ಯ ನೀರಿನ ಮೂಲಗಳೆಲ್ಲ ಬತ್ತಿ ಹೋಗಿವೆ. ಪಂಚಾಯಿತಿ ಬಾವಿಯಿಂದ ನೀರು ನೀಡುತ್ತಿದ್ದೇವೆ. ಅದು ಕೂಡ ಕಡಿಮೆಯಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆ ಆಶಾದಾಯಕವಾಗಿತ್ತು. ಆದರೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಟ್ಯಾಂಕರ್‌ನಲ್ಲಿ ನೀರು ಒದಗಿಸುವುದು ಕಷ್ಟದ ಮಾತು. ಹೊಳೆಯೂ ಬತ್ತಿದೆ. ಬೇಗ ಇದಕ್ಕೆ ಒಂದು ಪರಿಹಾರ ಸಿಕ್ಕರೆ ಒಳ್ಳೆಯದು.
ಬಿ.ಯು.ಅನಿತಾ, ಗ್ರಾಪಂ ಮಾಜಿ ಅಧ್ಯಕ್ಷ