ಶೀಘ್ರ ಅಂಡರ್‌ಪಾಸ್ ಕಾಮಗಾರಿ ಪ್ರಾರಂಭ: ಶಾಸಕ ರವಿಕುಮಾರ್ ಗಣಿಗ ಭರವಸೆ

Jaljeevan Mission started mandya
Published on

ಮಂಡ್ಯ: ಬಿ.ಗೌಡಗೆರೆ ಸಮೀಪ ಅಂಡರ್‌ಪಾಸ್ ಕಾಮಗಾರಿಗೆ ಶೀಘ್ರವೇ ಪ್ರಾರಂಭಿಸಲು ಕ್ರಮ ವಹಿಸಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ತಾಲೂಕಿನ ಬಿ.ಗೌಡಗೆರೆ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಪೈಪ್‌ಲೈನ್ ನೀರಿನ ಟ್ಯಾಂಕ್ ಮತ್ತು ಗ್ರಾಮದ 464 ಕುಟುಂಬಗಳ ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ 1,11 ಕೋಟಿ ರೂ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮದ ಕೆರೆ ದುರಸ್ತಿಗೊಳಿಸಲು ಕ್ರಿಯಾಯೋಜನೆ ರೂಪಿಸಲಾಗಿದೆ. ಕಾವೇರಿ ನೀರನ್ನು ಶ್ರೀರಂಗಪಟ್ಟಣದಿಂದ ಗ್ರಾಮಕ್ಕೆ ಹರಿಸಲಾಗುವುದು. ಈ ಯೋಜನೆಗೆಂದು 250 ಕೋಟಿ ರೂ ಟೆಂಡರ್ ಆಗಿದೆ. ಇದರಿಂದಾಗಿ ಮಂಡ್ಯ ನೆಲದಲ್ಲಿ ಕಾವೇರಿ ನದಿ ಹುಟ್ಟಿದರೂ ಸ್ಥಳೀಯ ಜನರಿಗೆ ನೀರು ಸಿಗುತ್ತಿಲ್ಲ ಎನ್ನುವ ಕೊರಗು ದೂರವಾಗಲಿದೆ ಎಂದರು.

ಬಳಿಕ ತಾಲೂಕಿನ ಡಣನಾಯಕಪುರ ಗ್ರಾಮದಲ್ಲಿ ರಸ್ತೆ ಅಭಿವೃದ್ದಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕರು, ಗ್ರಾಮದ ರಸ್ತೆ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ. ಸಿ.ಸಿ ರಸ್ತೆ ಅಭಿವೃದ್ದಿಗೆ 10 ಲಕ್ಷ ರೂ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಈ ಗ್ರಾಮಕ್ಕೆ ರಸ್ತೆ ಅಭಿವೃದ್ದಿಗಾಗಿ 35 ಲಕ್ಷ ರೂ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

ಮನ್‌ಮುಲ್ ನಿರ್ದೇಶಕ ಯು.ಸಿ.ಶಿವಕುಮಾರ್(ಶಿವಪ್ಪ), ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ನಾಗರಾಜ್, ಗ್ರಾ.ಪಂ ಅಧ್ಯಕ್ಷೆ ಸವಿತಾ, ಮಾಜಿ ಅಧ್ಯಕ್ಷ ಸಿದ್ದೇಗೌಡ, ಸದಸ್ಯರಾದ ಮೋಹನ್, ಮಹದೇವಮ್ಮ, ಸವಿತಾ ಶಿವರಾಂ, ವಿಶ್ವನಾಥ ಶೆಟ್ಟಿ, ಜಯರಾಂ, ಪುಟ್ಟಸ್ವಾಮಿ, ಕೃಷ್ಣೇಗೌಡ, ಹನಕೆರೆ ಯಶ್ವಂತ್, ಯೋಗಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net