

ಸಂತೋಷ ಮುರಡಿ ಮುಂಡರಗಿ
ತುಂಗಭದ್ರಾ ನದಿಯಿಂದ ವಿವಿಧ ಕೆರೆಗಳನ್ನು ತುಂಬಿಸುವ ಜಾಲವಾಡಗಿ ಏತ ನೀರಾವರಿ ಯೋಜನೆ ವಿಳಂಬವಾಗುತ್ತಿದೆ. ಇದರಿಂದಾಗಿ ಈ ಭಾಗದ ರೈತರ ಹಲವು ವರ್ಷಗಳ ಕನಸು ಈವರೆಗೂ ನನಸಾಗಿಲ್ಲ. ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಯೋಜನೆಗೆ ಅನುಮೋದನೆ ನೀಡಬೇಕು ಎಂಬ ಕೂಗು ಎಲ್ಲೆಡೆ ಕೇಳಿಬರುತ್ತಿದೆ.
ಜಾಲವಾಡಗಿ ಏತ ನೀರಾವರಿ ಯೋಜನೆ ಆರಂಭವಾದರೆ ಮುಂಡರಗಿ, ಶಿರಹಟ್ಟಿ ಮತ್ತು ಗದಗ ತಾಲೂಕಿನ ಒಟ್ಟು 29 ಕೆರೆ ಮತ್ತು ಕೆಲವು ಚೆಕ್ ಡ್ಯಾಂಗಳನ್ನು ತುಂಬಿಸಬಹುದು. ಕೆರೆಗಳು ತುಂಬಿದರೆ ಅಂತರ್ಜಲ ವೃದ್ಧಿಯಾಗಿ ಕೊಳವೆಬಾವಿ, ಬಾವಿಗಳಲ್ಲಿ ನೀರು ದೊರೆಯುತ್ತದೆ. ಜನ-ಜಾನುವಾರುಗಳಿಗೆ ಅನುಕೂಲವಾಗಲಿದೆ.
2017-18ರಲ್ಲಿ ಸುಮಾರು 20 ಕೆರೆಗಳನ್ನು ತುಂಬಿಸಲು 110.82 ಕೋಟಿ ರೂಪಾಯಿ ವೆಚ್ಚದಲ್ಲಿ ಜಾಲವಾಡಗಿ ಏತ ನೀರಾವರಿ ಯೋಜನೆ ರೂಪಿಸಿ ಸರ್ಕಾರಕ್ಕೆ ವಿಸõತ ವರದಿ ಸಲ್ಲಿಸಲಾಗಿತ್ತು. ಆದರೆ, ಯೋಜನೆಗೆ ಈವರೆಗೂ ಅನುಮೋದನೆ ದೊರೆತಿಲ್ಲ.
ಯೋಜನೆಯ ಮಾರ್ಪಡಿತ ಪ್ರಸ್ತಾವನೆಯಲ್ಲಿ ಮುಂಡರಗಿ, ಶಿರಹಟ್ಟಿ, ಗದಗ ತಾಲೂಕಿನ 29 ಕೆರೆಗಳು, ಚೆಕ್ ಡ್ಯಾಂಗಳನ್ನು ತುಂಗಭದ್ರಾ ನದಿ ನೀರಿನಿಂದ ತುಂಬಿಸುವ 197.5 ಕೋಟಿ ರೂಪಾಯಿ ವೆಚ್ಚದ ಯೋಜನಾ ವರದಿ ತಯಾರಿಸಿ ಪರಿಷ್ಕೃತ ಅಂದಾಜು ಪಟ್ಟಿಯನ್ನು 2020ರ ಸೆಪ್ಟೆಂಬರ್ನಲ್ಲಿ ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರ ಈ ಬಜೆಟ್ನಲ್ಲಿ ಅನುಮೋದನೆ ನೀಡಬೇಕೆನ್ನುವುದು ಈ ಭಾಗದ ರೈತರ ಒತ್ತಾಯವಾಗಿದೆ.
ಹಮ್ಮಿಗಿ ಬಳಿಯ ಸಿಂಗಟಾಲೂರ ಏತ ನೀರಾವರಿ ಬ್ಯಾರೇಜ್ ಹತ್ತಿರ ಪ್ರತ್ಯೇಕವಾಗಿ ಎರಡು ಹಂತದ ಜಾಕ್ವೆಲ್ ನಿರ್ವಿುಸಿ ಅಲ್ಲಿಂದ ಮುಂಡರಗಿ ತಾಲೂಕಿನ ಹಮ್ಮಿಗಿ ಸ್ವಾಗಿನಕೆರೆ, ಜಾಲವಾಡಗಿ ಸಮೀಪದ ಕಟ್ಟೆ ಬಸವಣ್ಣಕೆರೆ, ಮುರುಡಿ, ಕೆಲೂರ, ಚಿಕ್ಕವಡ್ಡಟ್ಟಿ, ಶಿರಹಟ್ಟಿ ತಾಲೂಕಿನ ಕಡಕೋಳ, ಜಲ್ಲಿಗೇರಿ, ಹೊಸಳ್ಳಿ, ಮಾಗಡಿ, ಗದಗ ತಾಲೂಕಿನ ಮಾಲಿಂಗಪೂರ, ಸೊರಟೂರ, ಅತ್ತಿಕಟ್ಟಿ, ನಭಾಪೂರ, ನಾಗಾವಿ, ಹೊಸೂರ, ಶೀತಲಕೆರೆ, ಹರ್ತಿ, ಕುರ್ತಕೋಟಿ, ಮುಳಗುಂದ, ಕಬುಲಾಯದಕಟ್ಟಿ, ಬೆಳದಡಿ, ಮಲ್ಲಸಮುದ್ರ, ಕಣವಿ, ಚಿಂಚಲಿ, ಕಲ್ಲೂರ, ನೀಲಗುಂದ, ಕಳಸಾಪೂರ, ಪಾಪನಾಶಿ ಸೇರಿ ಒಟ್ಟು 29 ಕೆರೆ ಮತ್ತು ವಿವಿಧ ಚೆಕ್ಡ್ಯಾಂಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ.
ಜಾಲವಾಡಗಿ ಏತ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡಲಾಗಿದೆ. ಆದರೆ, ಈವರೆಗೂ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರ ಬಜೆಟ್ನಲ್ಲಿ ಈ ಯೋಜನೆಗೆ ಅನುಮೋದನೆ ನೀಡಿ ತ್ವರಿತಗತಿಯಲ್ಲಿ ಕಾಮಗಾರಿ ಕೈಗೊಂಡು ತುಂಗಭದ್ರಾ ನದಿ ನೀರಿನಿಂದ ವಿವಿಧ ಕೆರೆಗಳನ್ನು ತುಂಬಿಸಬೇಕು.| ಲೋಕನಗೌಡ ಪಾಟೀಲ. ಬಾಗೇವಾಡಿ ರೈತ, ಮುರಿಗೆಪ್ಪಗೌಡ ಪಾಟೀಲ ಜಾಲವಾಡಗಿ ರೈತ
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ವಿವಿಧ ಕೆರೆಗಳನ್ನು ತುಂಬಿಸುವ ಜಾಲವಾಡಗಿ ಏತ ನೀರಾವರಿ ಯೋಜನೆ ರೂಪಿಸಲಾಗಿತ್ತು. ನಂತರ ಚುನಾವಣೆ ನೀತಿ ಸಂಹಿತೆ ಘೊಷಣೆ ಹಿನ್ನೆಲೆಯಲ್ಲಿ ಕ್ಯಾಬಿನೆಟ್ನಲ್ಲಿ ಅನುಮೋದನೆ ದೊರೆತಿರಲಿಲ್ಲ. ಅಂದಿನಿಂದ ಈವರೆಗೂ ಯೋಜನೆ ನನೆಗುದಿಗೆ ಬಿದ್ದಿದೆ. ಸರ್ಕಾರ ಈ ಬಾರಿಯ ಬಜೆಟ್ನಲ್ಲಿ ಯೋಜನೆಗೆ ಅನುಮೋದನೆ ನೀಡುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು.| ರಾಮಕೃಷ್ಣ ದೊಡ್ಡಮನಿ, ಮಾಜಿ ಶಾಸಕ ಶಿರಹಟ್ಟಿ ಕ್ಷೇತ್ರ
ಜಾಲವಾಡಗಿ ಏತ ನೀರಾವರಿ ಯೋಜನೆ ಜಾರಿಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ವಿವಿಧ ಕೆರೆಗಳನ್ನು ತುಂಬಿಸುವ ಯೋಜನೆಗೆ ಬಜೆಟ್ನಲ್ಲಿ ಅನುಮೋದನೆ ಸಿಗಲಿದೆ ಎನ್ನುವ ವಿಶ್ವಾಸವಿದೆ.| ರಾಮಣ್ಣ ಲಮಾಣಿ, ಶಾಸಕ ಶಿರಹಟ್ಟಿ ಮತಕ್ಷೇತ್ರ
ಮಾರ್ಪಡಿತ ಯೋಜನಾ ವರದಿಯಲ್ಲಿ 29 ಕೆರೆಗಳನ್ನು ತುಂಬಿಸುವುದಕ್ಕೆ 197.5 ಕೋಟಿ ರೂಪಾಯಿ ವೆಚ್ಚದ ಪರಿಷ್ಕೃತ ಅಂದಾಜು ಪಟ್ಟಿಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ದೊರೆತ ನಂತರ ಮುಂದಿನ ಕ್ರಮಕ್ಕೆ ಮುಂದಾಗಲಾಗುವುದು.| ಪ್ರಭಾಕರ ಎ., ಎಇಇ ಸಿಂಗಟಾಲೂರ ಏತ ನೀರಾವರಿ ಯೋಜನೆ