

ಬಂಟ್ವಾಳ: ಸಜಿಪಮೂಡ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಡಿರ್ಪಾಟ್ಮೆಂಟ್ ಆಫ್ ಲ್ಯಾಂಡ್ ರಿಸೋರ್ಸಸ್ ಗ್ರಾಮೀಣ ಮಂತ್ರಾಲಯ, ಕೃಷಿ ಇಲಾಖೆ ಸಹಯೋಗದಲ್ಲಿ ಜಲಾನಯನ ಯಾತ್ರೆ ಕಾರ್ಯಕ್ರಮ ನಡೆಯಿತು.
ಕೇಂದ್ರ ಭೂಸಂಪನ್ಮೂಲ ಇಲಾಖೆಯ ತಜ್ಞ ಡಾ.ಎನ್.ಕೆ. ರಾಜೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮಣ್ಣು ನೀರಿನ ಸಂರಕ್ಷಣೆ ಮಾಡುವುದು ಅತಿ ಅವಶ್ಯಕವಾಗಿದೆ. ಮಣ್ಣಿನ ಸವಕಳಿ ತಪ್ಪಿಸಲು ಬದುಗಳನ್ನು ನಿರ್ಮಿಸಿಕೊಳ್ಳಬೇಕು ಹಾಗೂ ಜಲಾನಯನ ಯಾತ್ರೆಯು ಮಣ್ಣು ಮತ್ತು ನೀರಿನ ಸಂರಕ್ಷಣೆ, ನೀರು ಕೊಯ್ಲು ಮತ್ತು ಪುನರಭರ್ತಿ ಚಟುವಟಿಕೆಗಳಂತಹ ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವ ಗುರಿ ಹೊಂದಿದೆ ಎಂದರು.
ಪಂಚಾಯಿತಿ ಅಧ್ಯಕ್ಷೆ ಶೋಭಾ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ಕೆ.ಆರ್.ಸ್ವಾಗತಿಸಿದರು. ಆತ್ಮ ಯೋಜನೆ ಎಟಿಎಂ ಹನಮಂತ ಕಾಳಗಿ ಭೂಮಿ ಮತ್ತು ಜಲ ಸಂರಕ್ಷಣೆಯ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ಕಾರ್ಯಕ್ರಮ ಅನುಷ್ಠಾನದಲ್ಲಿ ಸಹಕರಿಸಿದವರಿಗೆ ಜಲಾನಯನ ಮಾರ್ಗದರ್ಶಕ ಪ್ರಮಾಣಪತ್ರ ವಿತರಿಸಲಾಯಿತು.
ಕಿರುಚಿತ್ರ ಪ್ರದರ್ಶನ, ಬಾಗಿನ ಅರ್ಪಣೆ
ಜಲಾನಯನ ಚಟುವಟಿಕೆಗಳ ಕುರಿತ ಕಿರುಚಿತ್ರ ಪ್ರದರ್ಶಿಸಲಾಯಿತು. ಮಾರ್ನಬೈಲ್ ದ್ವಾರದಿಂದ ಸಜಿಪಮೂಡ ಪಂಚಾಯಿತಿ ವರೆಗೆ ಜಲಾನಯನ ಜಾಥಾ ಕಾರ್ಯಕ್ರಮ ಆಯೋಜಿಸಲಾಯಿತು. ಯಾತ್ರೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ಮಣ್ಣು ಮತ್ತು ನೀರು ಸಂರಕ್ಷಣೆ ವಿಷಯದಲ್ಲಿ ಆಯೋಜಿಸಲಾಗಿದ್ದ ರಂಗೋಲಿ ಸ್ವರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಯಿತು. ಮುಂಭಾಗದಲ್ಲಿ ಸಪೋಟ ಗಿಡ ನಾಟಿ ಮಾಡುವುದರ ಮೂಲಕ ವನಮಹೋತ್ಸವ ಆಚರಿಸಲಾಯಿತು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ದ.ಕ. ಜಿಲ್ಲೆ ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪ ಗೋವಿಂದೇ ಗೌಡ, ಮಂಗಳೂರು ಉಪವಿಭಾಗದ ಉಪಕೃಷಿ ನಿರ್ದೇಶಕಿ ಕುಮುದ, ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್., ಕೃಷಿ ಅಧಿಕಾರಿ ನಂದನ್ ಶೆಣೈ ಪಿ., ಸಜೀಪಮುನ್ನೂರು ಗ್ರಾಪಂ ಅಧ್ಯಕ್ಷೆ ಅನಿತಾ, ಬಂಟ್ವಾಳ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪದ್ಮರಾಜ ಬಲ್ಳಾಳ್ ಮಾವಂತೂರು, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಪದ್ಮನಾಭ ರೈ ಗೋಳ್ತಮಜಲು, ಪಂಚಾಯಿತಿ ಸದಸ್ಯರಾದ ವಿಶ್ವನಾಥ ಬೆಳ್ಚಡ, ಯೋಗೀಶ್ ಬೆಳ್ಚಡ, ಹಮೀದ್, ಸಿದ್ಧೀಕ್, ಅಬ್ದುಲ್ ಕರೀಂ, ಸೋಮನಾಥ, ಸೀತಾರಾಮ ವಿಜಯ , ಅರುಂಧತಿ, ಮಹಾದೇವಿ, ಪ್ರಮೀಳಾ, ಪಂಚಾಯಿತಿ ಕಾರ್ಯದರ್ಶಿ ಸುಜಾತ ಮತ್ತಿತರರು ಉಪಸ್ಥಿತರಿದ್ದರು.