

ದೇವದುರ್ಗ: ತಾಲೂಕಿನ ಜಾಲಹಳ್ಳಿಯ ಶ್ರೀ ಲಕ್ಷ್ಮೀ ರಂಗನಾಥ ಸ್ವಾಮಿ ಮಹಾರಥೋತ್ಸವ ಏ.12ರಂದು ಜರುಗಲಿದ್ದು, ಜಾತ್ರೆ ಅಂಗವಾಗಿ ನಾಲ್ಕೈದು ದಿನಗಳಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಿದವು.
ಮೈಸೂರು ಜಿಲ್ಲೆಯ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಪೂಜಾ ವಿಧಿವಿಧಾನಗಳೇ ಇಲ್ಲೂ ಜರುಗುತ್ತವೆ. ರಂಗನಾಥ ಸ್ವಾಮಿಯ 9 ವಾಹನಗಳಲ್ಲಿ ನಿತ್ಯ ರಾತ್ರಿ ಒಂದು ವಾಹನ ಮೆರವಣಿಗೆ ಜರುಗಲಿದೆ.
ರಥೋತ್ಸವದ ಮುನ್ನಾದಿನವಾದ ಶುಕ್ರವಾರ ದೇವಸ್ಥಾನದ ಆವರಣದಲ್ಲಿ ಭಕ್ತರಿಂದ ನೀರಿನ ಆಟ ಅದ್ದೂರಿಯಾಗಿ ಜರುಗಿತು. ಸಾವಿರಾರು ಯುವಕರು ಭಾಗವಹಿಸಿ ಸಂಭ್ರಮಿಸಿದರು.
ಜಾಲಹಳ್ಳಿ ಸುತ್ತಲಿನ ಹಳ್ಳಿಗಳಲ್ಲಿ 500ಕ್ಕೂ ಹೆಚ್ಚು ಯುವಕರು ಈ ಬಾರಿ ಗೋವಿಂದ ಮಾಲೆ ಧರಿಸಿ ನಿತ್ಯ ವಿಶೇಷ ಪೂಜೆ, ಬೆಳಗ್ಗೆ 4 ಗಂಟೆಗೆ ಸ್ನಾನ, ಪ್ರತ್ಯೇಕವಾಗಿ ದೇವಸ್ಥಾನಗಳಲ್ಲೇ ವಾಸ ಇದ್ದು ವ್ರತ ಕೈಗೊಂಡಿದ್ದಾರೆ.
ಸಮೀಪದ ಹೊಸೂರು ಸಿದ್ದಾಪುರ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಗೋವಿಂದ ಮಾಲೆ ಧರಿಸಿದ ಭಕ್ತರಿಗೆ ಗ್ರಾಮಸ್ಥರು ಅನ್ನ ಸಂತರ್ಪಣೆ ಕೈಗೊಂಡರು. ಸುತ್ತಲಿನ ಗ್ರಾಮಗಳ ಭಕ್ತರು ಭಾಗವಹಿಸಿ ವ್ರತ ಕೈಗೊಂಡರು. ದೀರ್ಘದಂಡ ನಮಸ್ಕಾರ ಸಾಕಿ ಭಕ್ತಿ ಸಮರ್ಪಣೆ ಮಾಡಿದರು.