

ನೆಲಮಂಗಲ: ಜೆಡಿಎಸ್ ಮುಖ್ಯಸ್ಥ ಎಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದಾಗಲೂ ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ತನ್ಮೂಲಕ ಅವರು ಅಪರೂಪದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ ಎಂದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಹೇಳಿದರು.
ನೆಲಮಂಗಲಕ್ಕೆ ಭಾನುವಾರ ಆಗಮಿಸಿದ್ದ ಜನತಾ ಜಲಧಾರೆ ಗಂಗಾರಥವನ್ನು ಸ್ವಾಗತಿಸಿದ ಬಳಿಕ ನಗರದಾದ್ಯಂತ ಮೆರವಣಿಗೆ ಮಾಡಿ, ಕವಾಡಿ ಮಠದ ಮೈದಾನದಲ್ಲಿ ಸಂಜೆ ಏರ್ಪಾಡಾಗಿದ್ದ ಸಮಾವೇಶದಲ್ಲಿ ಮಾತನಾಡಿದರು. ರಾಜ್ಯದ 184 ವಿಧಾನಸಭಾ ಕ್ಷೇತ್ರಗಳಲ್ಲಿ ಜನತಾ ಜಲಧಾರೆ ಅಭಿಯಾನ ನಡೆಯುತ್ತಿದೆ. ನೆಲಮಂಗಲಕ್ಕೆ ಆಗಮಿಸಿರುವ ಗಂಗಾರಥ ಇನ್ನೆರಡು ದಿನ ತಾಲೂಕಿನಾದ್ಯಂತ ಸಂಚರಿಸಲಿದೆ ಎಂದರು.
2006, 2018ರಲ್ಲಿ ಎರಡು ಬಾರಿ ಸಿಎಂ ಆಗಿ ಮೈತ್ರಿ ಸರ್ಕಾರವನ್ನು ಮುನ್ನಡೆಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಈ ಬಾರಿ ಸ್ವತಂತ್ರವಾಗಿ ಬಹುಮತಗಳಿಸಿ ಸರ್ಕಾರ ರಚಿಸಲು ನಿರ್ಧರಿಸಿದ್ದಾರೆ. 2023ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಲ್ಲಿ, ರಾಜ್ಯದ ಪ್ರತಿಯೊಬ್ಬರಿಗೂ ನೀರಿನ ಸೌಲಭ್ಯ ಕಲ್ಪಿಸಿಕೊಡುತ್ತಾರೆ ಎಂದು ಭರವಸೆ ನೀಡಿದರು.
ಪೂರ್ಣಕುಂಭದೊಂದಿಗೆ ಬೈಕ್ ರ‌್ಯಾಲಿ: ಪೂರ್ಣಕುಂಭ ಹೊತ್ತ ನೂರಾರು ಮಹಿಳೆಯರು ಸಾಗಿದಂತೆ ಜನತಾ ಜಲಧಾರೆಯ ಗಂಗಾರಥ ಮುಂದಕ್ಕೆ ಸಾಗಿತು. 300ಕ್ಕೂ ಹೆಚ್ಚು ಸವಾರರು ಕವಾಡಿ ಮಠದಿಂದ ಗೋವಿ ವೆಂಕಟೇಶ್ವರ ಕಲ್ಯಾಣ ಮಂಟಪದವರೆಗೆ ಬೈಕ್ ರ‌್ಯಾಲಿ ನಡೆಸಿದರು. ರ‌್ಯಾಲಿ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಜಿಪಂ ಮಾಜಿ ಸದಸ್ಯ ಟಿ. ತಿಮ್ಮರಾಯಪ್ಪ, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಯಣ್ಣ, ಜೆಡಿಎಸ್ ಕಸಬಾ ಅಧ್ಯಕ್ಷ ಕೆಂಪರಾಜು, ಸೋಂಪುರ ಹೋಬಳಿ ಅಧ್ಯಕ್ಷ ಮೋಹನ್‌ಕುಮಾರ್, ನಗರಸಭೆ ಸದಸ್ಯರಾದ ಎಂ. ಶಿವಕುಮಾರ್, ಅಂಜನಮೂರ್ತಿ, ಅಂಜಿನಪ್ಪ, ನರಸಿಂಹಮೂರ್ತಿ, ರೈತ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಲಕ್ಷ್ಮೀವೆಂಕಟೇಶ್, ತಾಪಂ ಮಾಜಿ ಸದಸ್ಯ ಬೆಟ್ಟೆಗೌಡ, ವರದನಾರಾಯಣ್, ಬಿ.ಕೆ.ಮುನಿರಾಜು, ಎಂ.ವಿ.ರುದ್ರೇಶ್, ಮುಖಂಡರಾದ ಕೋಡಪ್ಪನಹಳ್ಳಿ ವೆಂಕಟೇಶ್, ಮಂಜುನಾಥ್, ಜಕ್ಕನಹಳ್ಳಿ ರಮೇಶ್, ಸುರೇಶ್, ಉಮೇಶ್, ಅಂಜನಮೂರ್ತಿ, ಬಿ.ಎಂ. ಶ್ರೀನಿವಾಸ್, ಮುನಿರಾಜು, ಕೃಷ್ಣ, ಶೇಖರ್ ಮತ್ತಿತರರು ಇದ್ದರು.
ಬಾವಿಕೆರೆಯಲ್ಲಿ ಸಮಾರೋಪ: ಜನತಾ ಜಲಧಾರೆ ಅಭಿಯಾನದ ಸಮಾರೋಪ ಸಮಾರಂಭ ರಾಷ್ಟ್ರೀಯ ಹೆದ್ದಾರಿ ಪಕ್ಕದ ಬಾವಿಕೆರೆ ಗ್ರಾಮದಲ್ಲಿ ಮೇ 13ರಂದು ಆಯೋಜನೆಗೊಳ್ಳಲಿದೆ. ರಾಜ್ಯದ ವಿವಿಧ ಭಾಗಗಳಿಂದ 7 ಲಕ್ಷಕ್ಕೂ ಹೆಚ್ಚು ಜನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೆ ಮೈದಾನವನ್ನು ಸಮತಟ್ಟು ಮಾಡಲಾಗಿದೆ. ಕುಡಿಯುವ ನೀರು, ವಾಹನ ನಿಲುಗಡೆ, ವೇದಿಕೆ ಸೇರಿ ಪ್ರತಿಯೊಂದನ್ನೂ ವ್ಯವಸ್ಥೆಗೊಳಿಸಲಾಗುತ್ತಿದೆ ಎಂದು ಡಾ.ಕೆ.ಶ್ರೀನಿವಾಸಮೂರ್ತಿ ವಿವರಿಸಿದರು.