ಜಲಜೀವನ್ ಮಿಷನ್‌ಗೆ 885 ಕೋಟಿ ರೂ ಅನುಮೋದನೆ: ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮಾಹಿತಿ

Minister K.C.Narayanagowda
Published on

ಮಂಡ್ಯ: ಜಲಜೀವನ್ ಮಿಷನ್ ಯೋಜನೆಯಡಿ 885.19 ಕೋಟಿ ರೂ ಮೊತ್ತದ ಜಿಲ್ಲೆಯ ಐದು ಪ್ರತ್ಯೇಕ ಯೋಜನೆಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಮಾಹಿತಿ ತಿಳಿಸಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ನದಿ ಬಲಭಾಗದಲ್ಲಿರುವ 28 ಜನವಸತಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ ಅಂದಾಜು 39.04 ಕೋಟಿ ರೂ ಹಾಗೂ ಎಡಭಾಗದಲ್ಲಿರುವ 56 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ ಅಂದಾಜು ಮೊತ್ತ 58.61 ಕೋಟಿ ರೂ, ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ದಕ್ಷಿಣ ಭಾಗದಲ್ಲಿರುವ ಮಂಡ್ಯ ತಾಲೂಕಿನ 51 ಜನವಸತಿ ಮತ್ತು ಮದ್ದೂರು ತಾಲೂಕಿನ 117 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ 230.18 ಕೋಟಿ ರೂ, ಉತ್ತರ ಭಾಗದಲ್ಲಿರುವ ಮಂಡ್ಯ ತಾಲೂಕಿನ 240 ಜನವಸತಿ ಮತ್ತು ಮದ್ದೂರು ತಾಲೂಕಿನ 156 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗೆ 372.92 ಕೋಟಿ ರೂ, ಮಳವಳ್ಳಿ ತಾಲೂಕಿನ 151 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಯ 184.44 ಕೋಟಿ ರೂ ಮೊತ್ತದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಇನ್ನು ಪ್ರತಿಯೊಬ್ಬರಿಗೂ ಶುದ್ದ ಕುಡಿಯವ ನೀರು ನೀಡಬೇಕು ಎಂಬುದು ನಮ್ಮ ಸರ್ಕಾರದ ಕನಸು. ಅದೇ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೂ ಶುದ್ಧ ನೀರು ಪೂರೈಕೆ ಮಾಡುವ ಯೋಜನೆ ಜಾರಿಗೆ ತರಲಾಗಿದೆ. ಜೆಜೆಎಂ ಯೋಜನೆಯಡಿ ಜಿಲ್ಲೆಗೆ ಸುಮಾರು ಎರಡು ಸಾವಿರ ಕೋಟಿ ರೂ ಅನುದಾನ ನೀಡಲಾಗಿದೆ. ಮೊದಲ ಹಂತದಲ್ಲಿ ಕೆ.ಆರ್.ಪೇಟೆ, ನಾಗಮಂಗಲ, ಪಾಂಡವಪುರ ತಾಲೂಕಿಗೆ 791 ಕೋಟಿ ರೂ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಇದೀಗ 885 ಕೋಟಿ ರೂಪಾಯಿ ಮೊತ್ತದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಶೀಘ್ರವಾಗಿ ಕಾಮಗಾರಿ ಆರಂಭಿಸಿ, ಆದಷ್ಟು ಬೇಗ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net