

ಮಡಿಕೇರಿ:
ಹರ್ ಘರ್ ಜಲ ಅಥವಾ ಪ್ರತಿ ಮನೆಗೂ ನೀರು ಎಂಬುದು ಭಾರತ ಸರ್ಕಾರದ ಜಲಶಕ್ತಿ ಸಚಿವಾಲಯ 2019ರಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿ ಪ್ರಾರಂಭಿಸಿದ ಒಂದು ಯೋಜನೆ. 2024 ರ ವೇಳೆಗೆ ಪ್ರತಿ ಗ್ರಾಮೀಣ ಕುಟುಂಬಕ್ಕೆ ತಲಾ ದಿನಕ್ಕೆ 55 ಲೀಟರ್ ನಲ್ಲಿ ನೀರು ನಿಯಮಿತವಾಗಿ ದೀರ್ಘಾವಧಿಯ ಆಧಾರದ ಮೇಲೆ ಒದಗಿಸುವ ಗುರಿ ಈ ಯೋಜನೆಯದ್ದಾಗಿದೆ.
2019ರ ಆ. 15ರಂದು ಸ್ವಾತಂತ್ರ‍್ಯ ದಿನಾಚರಣೆ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ 3.60 ಲಕ್ಷ ಕೋಟಿ ರೂಪಾಯಿಗಳ ಬಜೆಟ್ ಅಡಿಯಲ್ಲಿ 2024 ರ ವೇಳೆಗೆ ಭಾರತದಾದ್ಯಂತ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಒದಗಿಸುವ ಗುರಿ ಘೋಷಿಸಿದ್ದರು.
ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ ಪಾಲು 2.08 ಲಕ್ಷ ಕೋಟಿ ರೂ. ಈ ಯೋಜನೆ ಕೇಂದ್ರ ಸರ್ಕಾರ-ಕೇಂದ್ರಾಡಳಿತ ಪ್ರದೇಶಗಳ ನಡುವೆ 100:0 ಅನುಪಾತದಲ್ಲಿ, ಕೇಂದ್ರ ಸರ್ಕಾರ-ಈಶಾನ್ಯ ರಾಜ್ಯಗಳು, ಹಿಮಾಲಯನ್ ರಾಜ್ಯ ಸರ್ಕಾರಗಳ ನಡುವೆ 90:10 ಅನುಪಾತದಲ್ಲಿ ಹಾಗೂ ಕೇಂದ್ರ ಸರ್ಕಾರ ಮತ್ತು ಇತರ ರಾಜ್ಯ ಸರ್ಕಾರಗಳ ನಡುವೆ 50:50 ಅನುಪಾತದಲ್ಲಿ ವೆಚ್ಚ ಹಂಚಿಕೆ ಮಾಡಲಾಗುತ್ತದೆ.
2024ರ ಅಂತ್ಯಕ್ಕೆ ಮನೆ ಮನೆಗೂ ಶುದ್ಧ ಕುಡಿಯುವ ನೀರಿನ ಪೂರೈಕೆ ಗುರಿಯನ್ನು ಯೋಜನೆ ಹೊಂದಿದ್ದರೂ ಯೋಜನೆಯ ಉದ್ದೇಶ ಇನ್ನೂ ಸಮರ್ಪಕವಾಗಿ ಜಾರಿ ಆಗಿಲ್ಲ. ಬಹುತೇಕ ಕಡೆಗಳಲ್ಲಿ ಕಾಮಗಾರಿ ಅಪೂರ್ಣ ಆಗಿದೆ. ಪೈಪ್‌ಲೈನ್ ಪೂರ್ಣವಾಗಿದ್ದರೂ ಇದಕ್ಕೆ ನೀರಿನ ಸಂಪರ್ಕ ಕೊಟ್ಟಿಲ್ಲ. ಟ್ಯಾಂಕ್‌ಗಳ ನಿರ್ಮಾಣ ಕಾರ್ಯ ಮುಗಿದಿರುವ ಕಡೆಗಳಲ್ಲಿ ಈಗಲೇ ಬಿರುಕು ಕಾಣಿಸಿಕೊಂಡಿದೆ. ಪೈಪ್‌ಗಳೂ ಒಡೆದಿರುವುದು ಕಂಡು ಬರುತ್ತಿದೆ. ಸರ್ಕಾರದ ಒಂದು ಉತ್ತಮ ಯೋಜನೆ ಸಂಪೂರ್ಣವಾಗಿ ಹಳ್ಳ ಹಿಡಿದಿರುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ. ಈ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಹೆಚ್ಚಿನ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಿಂದ ಕುಡಿಯುವ ನೀರು ಸಿಕ್ಕಿಲ್ಲ. ಅನೇಕ ಕಡೆ ಕಳಪೆ ಕಾಮಗಾರಿಗಳಾಗಿದೆ. ಹರಗ ಗ್ರಾಮದಲ್ಲೇ ಕಳೆದ ಮೂರು ವರ್ಷಗಳಿಂದ ನೀರು ಸಿಕ್ಕಿಲ್ಲ. ಕಾಮಗಾರಿ ಮುಗಿದಿದೆ. ಪೈಪ್‌ಲೈನ್ ಸಮರ್ಪಕವಾಗಿಲ್ಲ. ಅಧಿಕಾರಿಗಳು ಸುಳ್ಳು ಹೇಳಿಕೊಂಡೇ ಕಾಲ ಕಳೆಯುತ್ತಿದ್ದಾರೆ.
ಶರಣ್‌ಗೌಡ, ಕೃಷಿಕ, ಹರಗ ಗ್ರಾಮ
2024ರ ವೇಳೆಗೆ ಪ್ರತಿ ಗ್ರಾಮೀಣ ಮನೆಗಳಿಗೆ ಪ್ರತಿ ದಿನಕ್ಕೆ ನಿಯಮಿತವಾಗಿ 55 ಲೀಟರ್ ನಲ್ಲಿ ನೀರು ಒದಗಿಸುವ ಗುರಿ ಈ ಯೋಜನೆಯದ್ದು. ಆದರೆ ಮನೆ ಮನೆಗಳಿಗೆ ಜಲ ಜೀವನ್ ಮಿಷನ್ ಯೋಜನೆಯ ನೀರು ಮಾತ್ರ ಬಂದಿಲ್ಲ. ಆಯಾಯ ಗ್ರಾಮ ಪಂಚಾಯತ್‌ನವರು ಇದಕ್ಕೆ ಆದಷ್ಟು ಬೇಗನೆ ಪರಿಹಾರ ಕಂಡುಕೊAಡು ಶೀಘ್ರದಲ್ಲಿ ಮನೆ ಮನೆಗಳಿಗೆ ಜಲ ಜೀವನ್ ಯೋಜನೆಯಡಿ ಅಳವಡಿಸಿರುವ ಪೈಪ್‌ಗಳಲ್ಲಿ ನೀರು ಬಿಡಬೇಕು.
ಅಜರುದ್ದೀನ್, ಉದ್ಯಮಿ, ಶನಿವಾರಸಂತೆ
ಜಲಜೀವನ್ ಉತ್ತಮ ಯೋಜನೆ. ಆದರೆ ಅದನ್ನು ಸರಿಯಾಗಿ ರೂಪಿಸಿಲ್ಲ. ಹಳೆಯ ಪೈಪ್ ಲೈನ್ ಗೆ ಕನೆಕ್ಸನ್ ಕೊಟ್ಟಿದ್ದಾರೆ. ಇನ್ನು ಕೆಲವೆಡೆ ನಿರುಪಯುಕ್ತ ಟ್ಯಾಂಕ್ ನಿರ್ಮಾಣ ಮಾಡಿದ್ದಾರೆ. ಅಳವಡಿಸಿರುವ ಮೀಟರ್ ಅನೇಕ ಕಡೆ ಕಿತ್ತು ಹೋಗಿದೆ. ಈ ಯೋಜನೆ ಹೆಸರಲ್ಲಿ ಇದ್ದ ರಸ್ತೆಗಳನ್ನು ಅಗೆದು ಗುಂಡಿ ಮಾಡಿದ್ದಾರೆ. ಮಳೆ ಪ್ರಾರಂಭವಾಗುವ ಮುನ್ನ ಸರಿಪಡಿಸದಿದ್ದರೆ ಅನೇಕ ರಸ್ತೆ ಸಂಚಾರ ಸ್ಥಗಿತಗೊಳ್ಳಲಿದೆ. ಜಲಜೀವನ್ ಯೋಜನೆ ಎಂದು ದೊಡ್ಡ ನಾಮಫಲಕ ಅಳವಡಿಕೆ ಮಾಡಿದ್ದಾರೆ ಅದರ ಫಲ ಯಾರಿಗೂ ಸಿಕ್ಕಿಲ್ಲ.
ಭಾರತಿ ಷಡಕ್ಷರಿ, ಜೀವ ವಿಮಾ ಕಂಪನಿ ಹಿರಿಯ ಮಾರ್ಗದರ್ಶಕಿ, ಶನಿವಾರಸಂತೆ
ಜಲಜೀವನ್ ಮಿಷನ್ ಯೋಜನೆ ಒಳ್ಳೆಯ ಕಾರ್ಯಕ್ರಮ. ಆದರೆ ಸ್ಥಳೀಯ ಫಲಾನುಭವಿಗಳ ಅಭಿಪ್ರಾಯ ಪಡೆಯದೇ ಅವೈಜ್ಞಾನಿಕವಾಗಿ ಕಾರ್ಯಕ್ರಮ ರೂಪಿಸಲಾಗಿದೆ. ಇದು ನಮ್ಮ ದುರಾದೃಷ್ಟ. ಈ ಯೋಜನೆಯಿಂದ ನಮ್ಮ ದೇಶದ ಹಣಕಾಸು ಕೊಳ್ಳೆ ಹೊಡೆಯಲಾಗುತ್ತಿದೆ. ಸಂಬAಧಿಸಿದವರು ಕೂಡಲೇ ಎಚ್ಚೆತ್ತುಕೊಂಡು ಯೋಜನೆಯ ಆಶಯ ಯಶಸ್ವಿಗೊಳಿಸಬೇಕು.
ಹೊಸೂರು ಗಿರೀಶ್, ಕೃಷಿಕ, ಅವಂದೂರು ಗ್ರಾಮ
ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಳ್ಳದೇ ಇರುವುದರಿಂದ ಕಳೆದ ವರ್ಷ ಹಾಗೂ ಈ ವರ್ಷ ಕೊಡ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು ಟ್ಯಾಂಕರ್ ಮೂಲಕ ಗ್ರಾಮಗಳಿಗೆ ನೀರು ಸರಬರಾಜು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ದೊಡ್ಡ ಹಗರಣವೇ ನಡೆದಿದೆ ಎಂದು ಕೇಳಿಬರುತ್ತಿದೆ. ಈ ಬಗ್ಗೆ ತನಿಖೆ ಆಗಬೇಕು.
ಹನೀಫ್, ಮಾಲ್ದಾರೆ ಗ್ರಾಮ
ಕೆದಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 2 ವರ್ಷಗಳ ಹಿಂದೆಯೇ ಪೈಪ್ ಲೈನ್ ಕಾಮಗಾರಿ ನಿರ್ವಹಿಸಲಾಗಿದೆ. ಮೀಟರ್‌ಗಳನ್ನೂ ಅಳವಡಿಸಲಾಗಿದೆ. ಗ್ರಾಮದಲ್ಲಿ ಪಂಚಾಯಿತಿ ವತಿಯಿಂದ ಈ ಮೊದಲೇ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾಗಿದ್ದರೂ ಜಲಜೀವನ್ ಯೋಜನೆಯಿಂದ ಯಾವುದೇ ರೀತಿಯ ಪ್ರಯೋಜನವಾಗಿಲ್ಲ
ಸಂಜು ಪೊನ್ನಪ್ಪ, ಸದಸ್ಯ, ಗ್ರಾಮ ಪಂಚಾಯಿತಿ, ಕೆದಕಲ್
ಪ್ರತಿ ಮನೆಗಳಿಗೂ ಶುದ್ಧ ನೀರು ನೀಡುವ ಉದ್ದೇಶದಿಂದ ಜಲಜೀವನ್ ಮಿಷನ್ ಜಾರಿಗೊಳಿಸಲಾಗಿದೆ. ಆದರೆ ಕೊಡಗಿನಲ್ಲಿ ಇದು ಸಂಪೂರ್ಣವಾಗಿ ಅನುಷ್ಠಾನ ಆಗಿಲ್ಲ. ಕೆಲವು ಕಡೆ ಕುಡಿಯುವ ನೀರಿಗೆ ತೊಂದರೆ ಇದೆ. ಜಲ ಜೀವನ್ ಮಿಷನ್ ಅಡಿಯಲ್ಲಿ ಪೈಪ್ ಹಾಕಿದ್ದಾರೆ ಹೊರತು ನೀರಿನ್ನೂ ಸರಬರಾಜು ಆಗುತ್ತಿಲ್ಲ. ಆದಷ್ಟು ಬೇಗ ಎಲ್ಲಾ ಪೈಪ್ ಲೈನ್‌ಗಳು ಸರಿ ಆದರೆ ಬೇಸಿಗೆಯಲ್ಲಿ ಜನರ ಸಂಕಷ್ಟ ದೂರ ಆಗಬಹುದು.
ನೂತನ್, ಗೋಣಿಕೊಪ್ಪಲು ನಿವಾಸಿ
ಜಲಜೀವನ್ ಮಿಷನ್ ಯೋಜನೆ ಸರ್ಕಾರದ ಮಹತ್ವದ ಯೋಜನೆಯಾಗಿದ್ದು ಈ ಯೋಜನೆ ಸಮರ್ಪಕ ಮಟ್ಟದಲ್ಲಿ ನಡೆಯುತ್ತಿಲ್ಲ. ತಾಲೂಕಿನ ಹೆಚ್ಚು ಕಡೆಗಳಲ್ಲಿ ಜಲ್ ಜೀವನ್ ಮಿಷನ್ ಪೈಪ್ ಲೈನ್ ಅಳವಡಿಸಲಾಗಿದೆ. ಮನೆ ಮನೆಗೆ ಕೊಳಾಯಿಗಳನ್ನು ಹಾಕÀಲಾಗಿದೆ. ಆದರೆ ಈವರೆಗೂ ಕೂಡ ಕೆಲವು ಕಡೆಯಲ್ಲಿ ನೀರಿನ ಟ್ಯಾಂಕ್ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲವು ಕಡೆಗಳಲ್ಲಿ ಸರಿಯಾದ ರೀತಿ ಪೈಪ್ ಲೈನ್ ಅಳವಡಿಸಿಲ್ಲ. ಅಧಿಕಾರಿಗಳ ಹಾಗೂ ಸಂಬAಧ ಪಟ್ಟ ಇಲಾಖೆಯ ನಿರ್ಲಕ್ಷö್ಯ ಇಲ್ಲಿ ಎದ್ದು ಕಾಣುತ್ತಿದೆ.
ಬಿ.ವಿ. ವಿದ್ಯಾಶ್ರೀ, ವಿರಾಜಪೇಟೆ.
ಜಲಜೀವನ್ ಮಿಷನ್‌ಗೆ ಸಂಬAಧಿಸಿದAತೆ ಈಗಾಗಲೇ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಕೆಲವು ಕಡೆಗಳಲ್ಲಿ ಅಂತಿಮ ಹಂತದ ಕಾಮಗಾರಿಗಳು ನಡೆಯದಿರುವುದು ನನ್ನ ಗಮನಕ್ಕೆ ಬಂದಿದೆ. ಇದಲ್ಲದೆ ಬೇರೆ ಬೇರೆ ರೀತಿಯ ಸಮಸ್ಯೆಗಳೂ ಕಂಡುಬAದಿದೆ. ಬೂತ್ ಮಟ್ಟದಲ್ಲಿ ಇಂಥ ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಪಕ್ಷದ ಸಂಘಟನೆ ಮೂಲಕ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಸಮಸ್ಯೆಗಳಿಗೆ ಅಧಿಕಾರಿಗಳ ಮೂಲಕ ಪರಿಹಾರ ಕಂಡುಕೊAಡು ಮನೆ ಮನೆಗೂ ನಲ್ಲಿ ನೀರು ಪೂರೈಸಲು ಕ್ರಮ ತೆಗೆದುಕೊಳ್ಳಲಾಗುವುದು.
ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಕೊಡಗು-ಮೈಸೂರು ಸಂಸದ