

ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಜಲಜೀವನ್ ಮಿಷನ್(ಜೆಜೆಎಂ) ಯೋಜನೆ ಕುಂಟುತ್ತಾ ಸಾಗಿರುವ ಜತೆಗೆ ಈ ಹಿಂದೆ ಇದ್ದ ನೀರಿನ ಸಂಪರ್ಕಕ್ಕೂ ಕುತ್ತು ತಂದಿದೆ. ಮನೆ ಮನೆಗೆ ಕೊಳಾಯಿ ಮೂಲಕ ನೀರು ಹರಿಸುವ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಎಡವಟ್ಟಿನಿಂದ ಗ್ರಾಮೀಣರು ಕುಡಿವ ನೀರಿಗೆ ಪರದಾಡುವಂತಾಗಿದೆ.
ವ್ಯಕ್ತಿಯೊಬ್ಬರಿಗೆ ಪ್ರತಿದಿನ 55 ಲೀಟರ್ ನೀರಿನ ಅಗತ್ಯವಿದ್ದು, ಅದನ್ನು ಪ್ರತಿ ಮನೆಗೆ ಪೂರೈಸಲು ಜಲಜೀವನ್ ಮಿಷನ್ ಎಂಬ ವಿನೂತನ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ಜಿಲ್ಲೆಯಲ್ಲಿ ಕಾಮಗಾರಿ ನೆಪದಲ್ಲಿ ಈ ಹಿಂದಿನ ನೀರಿನ ಸಂಪರ್ಕ ಕಡಿತಗೊಳಿಸಿದ್ದು, ಕಾಮಗಾರಿ ಅಪೂರ್ಣಗೊಳಿಸಿರುವ ದೂರುಗಳು ಸಾಕಷ್ಟು ಕೇಳಿಬರುತ್ತಿವೆ. ಇದರಿಂದ ಗ್ರಾಮೀಣರು ಆಕ್ರೋಶಗೊಂಡಿದ್ದು, ಜೆಜೆಎಂ ಯೋಜನೆ ವಿರುದ್ಧ ಕಿಡಿಕಾರುತ್ತಿದ್ದಾರೆ.
67 ಗ್ರಾಮಗಳಲ್ಲಷ್ಟೇ ಕಾಮಗಾರಿ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 1,141 ಗ್ರಾಮಗಳಿಗೆ 880 ಕೋಟಿ ರೂ.ವೆಚ್ಚದ ಯೋಜನೆ ರೂಪಿಸಲಾಗಿದೆ. ಆದರೆ ಯೋಜನೆ ಆರಂಭಗೊಂಡ ದಿನದಿಂದ ಇದುವರೆಗೆ ಕೇವಲ 67 ಗ್ರಾಮಗಳಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಉಳಿದ ಗ್ರಾಮಗಳಲ್ಲಿ ಕಾಮಗಾರಿ ಆರಂಭಿಸುವ ಲಕ್ಷಣವೂ ಕಂಡುಬರುತ್ತಿಲ್ಲ. ಇದರಿಂದ ಜಲಜೀವನ್ ಮಿಷನ್ ಯೋಜನೆ ಜಿಲ್ಲೆಯಲ್ಲಿ ಹಳ್ಳಹಿಡಿಯಲಿದೆಯೇ ಎಂಬ ಅನುಮಾನ ಶುರುವಾಗಿದೆ.
ಗ್ರಾಮಗಳಲ್ಲಿ ವಿರೋಧ: ಜೆಜೆಎಂ ಯೋಜನೆಯಡಿ ರಸ್ತೆ ಅಗೆದು ಕೊಳಾಯಿ ಸಂಪರ್ಕ ಕಲ್ಪಿಸಬೇಕಿದೆ. ಆದರೆ ಕೆಲವು ಗ್ರಾಮಗಳಲ್ಲಿ ಅದೆಷ್ಟೋ ವರ್ಷದ ಬಳಿಕ ರಸ್ತೆಗಳು ಡಾಂಬರೀಕರಣಗೊಂಡಿವೆ. ಕೊಳಾಯಿ ಸಂಪರ್ಕಕ್ಕೆ ರಸ್ತೆ ಅಗೆಯಲು ಗ್ರಾಮಸ್ಥರು ಬಿಡುತ್ತಿಲ್ಲ ಎಂದು ಅಧಿಕಾರಿಗಳು ಕಾಮಗಾರಿ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ.
ನೀರಿನ ಸಂಪರ್ಕ ಕಡಿತ: ಈಗಾಗಲೇ ಕಾಮಗಾರಿ ಆರಂಭಿಸಿರುವ ಕೆಲವು ಗ್ರಾಮಗಳಲ್ಲಿ ಈ ಹಿಂದಿನ ಹಳೆಯ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ. ಜೆಜೆಎಂ ಯೋಜನೆಯಡಿ ನೀರಿನ ಸಂಪರ್ಕ ಕಲ್ಪಿಸಲಾಗಿಲ್ಲ. ಇದರಿಂದ ಈ ಹಿಂದೆ ಇದ್ದ ನೀರಿನ ಸಂಪರ್ಕವೂ ಇಲ್ಲದೆ ಹೊಸ ಸಂಪರ್ಕವೂ ಸಿಗದೆ ಅತಂತ್ರರಾಗಿರುವ ಜನತೆ ಕುಡಿವ ನೀರಿಗಾಗಿ ಪರದಾಡುವಂತಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಇಂಜಿನಿಯರ್ಗಳಿಗೆ ಬರ! ಜಿಲ್ಲೆಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ಇಂಜಿನಿಯರ್ಗಳ ಕೊರತೆಯೂ ಕಾಡುತ್ತಿದೆ. ಈಗಾಗಲೇ ಗುತ್ತಿಗೆ ಆಧಾರದಲ್ಲಿ ಇಂಜಿನಿಯರ್ಗಳನ್ನು ನೇಮಿಸಿಕೊಂಡಿದ್ದರು. ಇನ್ನು 14 ಇಂಜಿನಿಯರ್ಗಳ ಅವಶ್ಯಕತೆ ಇದೆ. ಇದರಿಂದ ಯೋಜನೆಗೆ ವೇಗ ದೊರೆಯುತ್ತಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ತಡವಾದ ಟೆಂಡರ್: 2019ರ ಆ.15 ರಂದು ಯೋಜನೆಯನ್ನು ಪ್ರಧಾನಮಂತ್ರಿ ಪ್ರಕಟಿಸಿದ್ದರು. 2021ರ ಅ. 2ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ರಾಪಂ ಮತ್ತು ಜಲಜೀವನ್ಮಿಷನ್ ಸಮಿತಿ, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳೊಂದಿಗೆ ಸಂವಾದ ನಡೆಸಿದ್ದರು. 2024ರ ವೇಳೆಗೆ ಗುರಿ ನೀಡಲಾಗಿತ್ತು. ಆದರೆ ಜಿಲ್ಲೆಯಲ್ಲಿ 2023 ಜನವರಿಯಲ್ಲಿ ಟೆಂಡರ್ ಕರೆಯಲಾಗಿದೆ, ವರ್ಕ್ ಆರ್ಡರ್ ತಡವಾಗಿದೆ, ಕೆಲವೊಂದು ಬಿಲ್ ಪೆಮೇಂಟ್ ಗೊಂದಲದಿಂದ ಕಾಮಗಾರಿ ಆರಂಭಕ್ಕೆ ಅಡೆತಡೆಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಮೆವೇಗ: ಈ ಯೋಜನೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತಲಾ ಶೇ.45ಅನುದಾನ ನೀಡಬೇಕಿದೆ. ಇನ್ನುಳಿದ ಶೇ.10 ಅನುದಾನವನ್ನು ಸ್ಥಳೀಯ ಆಡಳಿತದಿಂದ ಭರಿಸಬೇಕಿದೆ. ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಗ್ರಾಮಾಂತರ ಜಿಲ್ಲೆಯಲ್ಲಿ ಈ ಯೋಜನೆ ಆಮೆವೇಗದಲ್ಲಿ ಸಾಗಿದೆ.
ಜೆಜೆಎಂ ಯೋಜನೆ ಜಿಲ್ಲೆಯಲ್ಲಿ ಬಿಗ್ ಪೇಲ್ಯೂರ್ ಆಗಿದೆ. ಕೆಲ ಜನಪ್ರತಿನಿಧಿಗಳು ಈ ಯೋಜನೆಯನ್ನು ರಾಜಕೀಯವಾಗಿ ಬಳಸಿಕೊಂಡು ಕಾಮಗಾರಿ ದಿಕ್ಕು ತಪ್ಪಿಸುತ್ತಿದ್ದಾರೆ. ತಮ್ಮ ವೋಟ್ಬ್ಯಾಂಕ್ ಹಳ್ಳಿಗಳಿಗೆ ಆದ್ಯತೆ ನೀಡುವ ಭರದಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಪ್ರತಿ ಮನೆಗೂ ಕೊಳಾಯಿ ಮೂಲಕ ನೀರಿನ ಸೌಲಭ್ಯ ಕಲ್ಪಿಸಬೇಕಿದ್ದ ಯೋಜನೆ ಹಳ್ಳಹಿಡಿದಿದೆ.
ಬಿ.ಎನ್.ಬಚ್ಚೇಗೌಡ, ಸಂಸದ
ಜಿಲ್ಲೆಯಲ್ಲಿ ಜೆಜೆಎಂ ಯೋಜನೆ ಅನುಷ್ಠಾನಕ್ಕೆ ಟೆಂಡರ್ ಪ್ರಕ್ರಿಯೆ ತಡವಾಯಿತು, ವರ್ಕ್ ಆರ್ಡರ್ ಸೇರಿ ಕೆಲವೊಂದು ಆಡಳಿತಾತ್ಮಕ ಅಡೆತಡೆಗಳಿಂದ ಯೋಜನೆಗೆ ನಿರೀಕ್ಷಿತ ವೇಗ ದೊರೆತಿಲ್ಲ. ಎಲ್ಲೆಲ್ಲಿ ಕಾಮಗಾರಿ ಆರಂಭವಾಗಿದೆಯೋ ಅಲ್ಲಿ ಈ ಹಿಂದಿನ ನೀರಿನ ಸಂಪರ್ಕ ಕಡಿತಗೊಂಡಿರುವ ಕಡೆ ತಕ್ಷಣ ಪರ್ಯಾಯವಾಗಿ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಡಾ.ಅನುರಾಧಾ, ಸಿಇಒ ಬೆಂ.ಗ್ರಾಮಾಂತರ