

ವಿಜಯಪುರ: ನಗರ ವಿಧಾನ ಸಭೆ ಕ್ಷೇತ್ರದ ತೊರವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವರಸಪುರದ ವಿವಿಧ ಕಾಲನಿಗಳಿಗೆ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನೀರು ಪೂರೈಕೆಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬುಧವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಜೆಜೆಎಂ ಯೋಜನೆಯಡಿ ಪ್ರತಿಯೊಂದು ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿ ಪೂರ್ಣಗೊಂಡು ಎರಡು ವರ್ಷಗಳಾದರೂ ನೀರು ಪೂರೈಕೆಯಾಗುತ್ತಿರಲಿಲ್ಲ. ಇದರಿಂದ ಅಲ್ಲಿನ ನಿವಾಸಿಗಳಿಗೆ ಬಹಳ ತೊಂದರೆ ಉಂಟಾಗಿತ್ತು. ಈ ಸಮಸ್ಯೆ ಪರಿಹಾರಕ್ಕಾಗಿ ಕಳೆದ ವಿಧಾನಸಭೆ ಅಧಿವೇಶನದಲ್ಲಿ ಚುಕ್ಕೆ ರಹಿತ ಪ್ರಶ್ನೆ ಮೂಲಕ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು.
ಆಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯೊಂದಿಗೆ ಸಮನ್ವಯ ಸಾಧಿಸಿ, ಕೂಡಲೇ ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳುವುದಾಗಿ ಲಿಖಿತ ಭರವಸೆ ನೀಡಿದ್ದರು. ಅದರಂತೆ ಈಗ ನೀರು ಸರಬರಾಜು ಮಾಡಲು ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದ್ದು, ಇನ್ಮುಂದೆ ನವರಸಪುರದ ಎಲ್ಲ ಕಾಲನಿಗಳ ಪ್ರತಿ ಮನೆಗಳಿಗೆ ಶುದ್ಧ ನೀರು ಪೂರೈಕೆ ಆಗಲಿದೆ ಎಂದರು.
ಸಾರ್ವಜನಿಕರಿಗೆ ನೀರಿನ ತೊಂದರೆ ಆಗದಂತೆ ಸಮರ್ಪಕವಾಗಿ, ನೀರು ಬಿಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಗಚ್ಚಿನಮನಿ, ಸದಸ್ಯ ನಾಗೇಂದ್ರ ಯಾದವ, ಮುಖಂಡರಾದ ದಾದಾಸಾಹೇಬ ಬಾಗಾಯತ, ಸಂತೋಷ ಪಾಟೀಲ, ಅಡಿವೆಪ್ಪ ಸಾಲಗಲ್ಲ, ಸುನೀಲ ಚವಾಣ್, ಸುರೇಶ ಬಬಲೇಶ್ವರ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಎಸ್. ಗೋವಿಂದ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಮರಾವ ರಾಠೋಡ, ಪಿಡಿಒ ರಾಜೇಶ್ವರಿ ತುಂಗಳ ಮತ್ತಿತರರು ಇದ್ದರು.