126 ಕೋಟಿ ರೂ.ವೆಚ್ಚದಲ್ಲಿ ಜಲಜೀವನ್

Drinking Water
Published on

ಗೋಪಾಲಕೃಷ್ಣ ಪಾದೂರು, ಉಡುಪಿ

ಕೇಂದ್ರ ಸರ್ಕಾರದ ಜಲಜೀವನ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 2020-21ನೇ ಸಾಲಿಗೆ 126.29 ಕೋಟಿ ರೂ.ವೆಚ್ಚದಲ್ಲಿ 345 ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗಿದೆ. 72 ಕಾಮಗಾರಿಗಳಿಗೆ ವರ್ಕ್ ಆರ್ಡ್‌ರ್ ನೀಡಲಾಗಿದೆ. ಈ ವರ್ಷ ಒಟ್ಟು 57,478 ಮನೆಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಗುರಿಯಿದೆ.

ಉಡುಪಿ ತಾಲೂಕಿನಲ್ಲಿ 48.75 ಕೋಟಿ ರೂ. ವೆಚ್ಚದಲ್ಲಿ 64 ಕಾಮಗಾರಿ ನಡೆಯಲಿದೆ. 21,253 ಮನೆಗಳಿಗೆ ನಲ್ಲಿ ನೀರು ಸಂಪರ್ಕ ಸಿಗಲಿದೆ. ಕುಂದಾಪುರ ತಾಲೂಕಿನಲ್ಲಿ 37.81 ಕೋಟಿ ರೂ.ವೆಚ್ಚದಲ್ಲಿ 84 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, 18,424 ಮನೆಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಈ ಎಲ್ಲಾ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ.

ಕಾರ್ಕಳ ತಾಲೂಕಿನಲ್ಲಿ ಗರಿಷ್ಠ ಕಾಮಗಾರಿ: ಕಾರ್ಕಳದ ತಾಲೂಕಿನಲ್ಲಿ 39.73 ಕೋಟಿ ರೂ. ವೆಚ್ಚದಲ್ಲಿ 197 ಕಾಮಗಾರಿ ನಡೆಯಲಿದೆ. 192 ಕೆಲಸಗಳಿಗೆ ಟೆಂಡರ್ ಆಗಿದ್ದು, 17,801 ಮನೆಗಳಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಕಾರ್ಕಳ ತಾಲೂಕಿನ 34 ಗ್ರಾಪಂಗಳ 50 ಗ್ರಾಮಗಳಲ್ಲಿ, ಕುಂದಾಪುರ ತಾಲೂಕಿನ 23 ಗ್ರಾಪಂಗಳ 35 ಗ್ರಾಮಗಳಲ್ಲಿ, ಉಡುಪಿ ತಾಲೂಕಿನ 33 ಗ್ರಾಪಂಗಳ 55 ಗ್ರಾಮಗಳು ಸೇರಿದಂತೆ ಒಟ್ಟು 90 ಗ್ರಾಪಂಗಳ 140 ಗ್ರಾಮಗಳಲ್ಲಿ ಈ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಏನಿದು ಯೋಜನೆ?

2019ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಜಲಜೀವನ ಮಿಷನ್ ಯೋಜನೆ ಘೋಷಿಸಿದೆ. 2024ರ ವೇಳೆಗೆ ಎಲ್ಲ ಗ್ರಾಮೀಣ ಕುಟುಂಬಗಳ ಪ್ರತೀ ವ್ಯಕ್ತಿಗೆ ದಿನಕ್ಕೆ 55 ಲೀ. ಕುಡಿಯುವ ಶುದ್ಧ ನೀರು ಸರಬರಾಜು ಮಾಡುವುದು ಯೋಜನೆಯ ಉದ್ದೇಶ. ಈ ವರ್ಷ ಯೋಜನೆ ಮೂಲಕ ಕಾರ್ಕಳದಲ್ಲಿ 91 ಕೊಳವೆಬಾವಿ, 2 ತೆರೆದ ಬಾವಿ, 71 ಓವರ್‌ಹೆಡ್ ಟ್ಯಾಂಕ್, 1 ಫ್ರೆಶರ್ ಫಿಲ್ಟರ್ ನಿರ್ಮಾಣವಾಗಲಿದೆ. ಕುಂದಾಪುರದಲ್ಲಿ 3 ಕೊಳವೆಬಾವಿ, 9 ತೆರೆದಬಾವಿ, 25 ಓವರ್‌ಹೆಡ್ ಟ್ಯಾಂಕ್, ಉಡುಪಿಯಲ್ಲಿ 13 ಕೊಳವೆ ಬಾವಿ, 13 ತೆರೆದ ಬಾವಿ, 24 ಓವರ್‌ಹೆಡ್ ಟ್ಯಾಂಕ್, 9 ಫ್ರೆಶರ್ ಫಿಲ್ಟರ್ ನಿರ್ಮಿಸಲಾಗುತ್ತದೆ. ಕಾಮಗಾರಿಗಳು ಪೂರ್ಣಗೊಂಡ ಬಳಿಕ ಆಯಾ ಗ್ರಾಪಂಗಳಿಗೆ ಹಸ್ತಾಂತರಿಸಲಾಗುತ್ತಿದ್ದು, ನಿರ್ವಹಣೆ ಮಾಡುವ ಜವಾಬ್ದಾರಿ ನೀಡಲಾಗುತ್ತದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತ್ಯೇಕ ನೀರು ಪೂರೈಕೆ ಯೋಜನೆ ರೂಪಿಸಲಾಗಿದ್ದು, ಡಿಪಿಆರ್ ಹಂತದಲ್ಲಿದೆ.

2052ರ ಜನಸಂಖ್ಯೆಯನ್ನು ಗಮನದಲ್ಲಿರಿಸಿ ಜಲಜೀವನ್ ಮಿಷನ್ ಯೋಜನೆ ರೂಪಿಸಲಾಗಿದೆ. ಜಿಲ್ಲೆಯಲ್ಲಿ ಪ್ರಥಮ ಹಂತದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ವರ್ಷ ನೀರಿನ ಸಂಪರ್ಕ ಅಪೂರ್ಣವಾಗಿರುವ ಗ್ರಾಮಗಳತ್ತ ಲಕ್ಷೃ ವಹಿಸಲಾಗಿದೆ. ಮುಂದಿನ ವರ್ಷ ನೀರಿನ ಮೂಲವೇ ಇಲ್ಲದ ಗ್ರಾಮಗಳನ್ನು ಗುರುತಿಸಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಒಟ್ಟಿನಲ್ಲಿ 2024ಕ್ಕೆ ಜಿಲ್ಲೆಯ ಎಲ್ಲ ಮನೆಗಳಿಗೂ ನೀರಿನ ಸಂಪರ್ಕ ನೀಡಲಾಗುವುದು.

-ಡಾ.ನವೀನ್ ಭಟ್, ಸಿಇಒ, ಉಡುಪಿ ಜಿಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net