ಜಲಜೀವನ್ ಮಿಷನ್ ಯೋಜನೆಯಲ್ಲಿ ಹಗರಣ: ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಗಂಭೀರ ಆರೋಪ

02_02_Mdy_02(Press Meet)
Published on

ಮಂಡ್ಯ: ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮಳವಳ್ಳಿ ತಾಲೂಕಿನಲ್ಲಿ ಬಹುದೊಡ್ಡ ಹಗರಣ ನಡೆದಿದೆ. ಆದ್ದರಿಂದ ಈ ಸಂಬಂಧ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಮಾಜಿ ಸಚಿವರೂ ಆದ ಕೆಪಿಸಿಸಿ ಉಪಾಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಹೇಳಿದರು.

ಮಳವಳ್ಳಿ ಮಾತ್ರವಲ್ಲದೆ ಇಡೀ ಜಿಲ್ಲೆಯಲ್ಲಿ ಈಗಾಗಲೇ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನಗೊಂಡಿವೆ. ಗ್ರಾಮ ಪಂಚಾಯಿತಿ ಮಟ್ಟದಲ್ಲೂ ನೀರು ಪೂರೈಕೆ ವ್ಯವಸ್ಥೆಯಿದೆ. ಬಹುತೇಕ ಎಲ್ಲ ಗ್ರಾಮಗಳಲ್ಲಿ ಮನೆ ಮನೆಗೆ ಕುಡಿಯುವ ನೀರಿನ ಸಂಪರ್ಕ ಕೊಡಲಾಗಿದೆ. ಆದರೂ ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ನೀರಿನ ಸಂಪರ್ಕ ಕಲ್ಪಿಸುತ್ತಿರುವುದಾಗಿ ಹೇಳಲಾಗುತ್ತಿದೆ. ಆದರೆ, ಪೈಪ್‌ಲೈನ್ ಹಳೆಯದಾ?, ಹೊಸತಾ? ಅಥವಾ ಹಳೆಯದಕ್ಕೆ ಪರ್ಯಾಯವೇ ಎಂಬ ಮಾಹಿತಿ ಇಲ್ಲ. ಒಂದು ವೇಳೆ ಪರ್ಯಾಯವಾದರೆ ಅದರ ಅವಶ್ಯಕತೆಯಾದರೂ ಏನಿದೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಇನ್ನು ಯೋಜನೆಯಡಿ ನಿಗದಿಗಿಂತ ಕಡಿಮೆ ವ್ಯಾಸದ ಪೈಪ್‌ಗಳನ್ನು ಅಳವಡಿಸಲಾಗಿದೆ. ಆದರೆ, ಅವುಗಳ ಗುಣಮಟ್ಟ ಕಡಿಮೆಯಿದೆ. ಇದಕ್ಕೆಲ್ಲ ಯಾರು ಅನುಮೋದನೆ ನೀಡಿದರು. ಅಂದಾಜು ಯೋಜನೆ ಸಿದ್ಧಪಡಿಸಿದವರು ಯಾರು?. ಹಳೆಯ ಪೈಪ್‌ಲೈನ್ ಇದ್ದಾಗಲೂ ಹೊಸ ಪೈಪ್‌ಲೈನ್ ಮಾಡುವ ಅವಶ್ಯಕತೆ ಇತ್ತೇ? ಎನ್ನುವ ಪ್ರಶ್ನೆಗಳಿಗೆ ತನಿಖೆಯಿಂದ ಉತ್ತರ ಸಿಗಬೇಕಿದೆ. ಹಲವೆಡೆ ಹಳೆಯ ಪೈಪ್‌ಲೈನ್‌ನೊಂದಿಗೆ ಹೊಸ ಪೈಪ್‌ಲೈನ್ ಮಾಡಲಾಗಿದೆ. ಕೆಲವೆಡೆ ಹಳೆಯ ಪೈಪ್‌ಲೈನ್‌ಗೆ ಸಂಪರ್ಕ ನೀಡಿ, ಹೊಸದಾಗಿ ಪೈಪ್‌ಲೈನ್ ಮಾಡಲಾಗಿದೆ ಎಂದು ಬಿಲ್ ಮಾಡಿಕೊಳ್ಳಲಾಗಿದೆ. ಎಸ್.ಆರ್ ದರಕ್ಕಿಂತ ಹೆಚ್ಚು ಮೊತ್ತಕ್ಕೆ ಟೆಂಡರ್ ನೀಡಲಾಗಿದೆ. ಬಹುತೇಕ ಕಾಮಗಾರಿಗಳಲ್ಲಿ ಶೇ.70ರಷ್ಟು ಸಾಮಗ್ರಿ ವೆಚ್ಚವಾಗಿ ಬಿಲ್ ಮಾಡಲಾಗಿದೆ ಎಂದು ಆರೋಪಿಸಿದರು.

ಮೂರು ಅಡಿ ಆಳದಲ್ಲಿ ಪೈಪ್‌ಲೈನ್ ಅಳವಡಿಸಬೇಕೆಂಬ ನಿಯಮವನ್ನು ಕಾಮಗಾರಿಯಲ್ಲಿ ಉಲ್ಲಂಘಿಸಲಾಗಿದೆ. ಪೈಪ್‌ಲೈನ್‌ಗಾಗಿ ರೋಡ್ ಕಟ್ಟಿಂಗ್ ಮಾಡಿದ್ದು, ಅವುಗಳಿಗೆ ಕಾಂಕ್ರಿಟ್ ರೀಫಿಲ್ಲಿಂಗ್ ಮಾಡುತ್ತಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಂಡಿರುವ ಗ್ರಾಮಗಳಲ್ಲೂ ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಮತ್ತೊಂದು ಸಂಪರ್ಕ ನೀಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.

ಮಳವಳ್ಳಿ ತಾಲೂಕಿನಲ್ಲಿ 127 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಆಗಿದ್ದು, 6 ತಿಂಗಳಲ್ಲಿ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಹಲವೆಡೆ 2 ವರ್ಷವಾದರೂ ಪೂರ್ಣವಾಗಿಲ್ಲ. ಒಂದೇ ಯೋಜನೆಗೆ 3-4 ಅನುದಾನಗಳನ್ನು ಬಳಸಲಾಗುತ್ತಿದೆ. ಹಳೆಯ ಬೋರ್‌ವೆಲ್‌ಗಳನ್ನೇ ತೋರಿಸಿ, ಬಿಲ್ ಮಾಡಲಾಗಿದೆ. ಸ್ಥಳೀಯ ಶಾಸಕರ ಬೆಂಬಲಿಗರೇ ಶೇ.50ರಷ್ಟು ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಈ ಮೂಲಕ ಸಾರ್ವಜನಿಕರ ತೆರಿಗೆ ಹಣ ಪೋಲಾಗುವ ಜತೆಗೆ ಲೂಟಿಯೂ ಆಗುತ್ತಿದೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ಮಳವಳ್ಳಿ ತಾಲೂಕಿನಲ್ಲಿ ಬಿ.ಜಿ.ಪುರ ಮತ್ತು ಇತರ 56 ಹಳ್ಳಿಗಳು, ನೆಟ್ಕಲ್ ಮತ್ತು ಇತರ 20 ಗ್ರಾಮಗಳು, ಕಿರುಗಾವಲು ಮತ್ತು ಇತರ 46 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಮೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನಗೊಂಡಿವೆ. ಈ ಯೋಜನೆ ವ್ಯಾಪ್ತಿಯಲ್ಲಿ ಬಹುತೇಕ ಗ್ರಾಮಗಳ ಮನೆ ಮನೆಗೆ ನೀರಿನ ಸಂಪರ್ಕ ಕೊಡಲಾಗಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜಲಜೀವನ್ ಮಿಷನ್ ಯೋಜನೆ ದಿಕ್ಕು ತಪ್ಪಬಾರದು. ಜತೆಗೆ ಜನರ ತೆರಿಗೆ ಹಣವೂ ಪೋಲಾಗಬಾರದು ಎಂಬುದಷ್ಟೇ ತಮ್ಮ ಆಶಯ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿ.ಪಂ ಮಾಜಿ ಅಧ್ಯಕ್ಷ ಸುರೇಶ್ ಕಂಠಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net