ಮಸಳಿಯಲ್ಲಿ ಜಲ ಜೀವನ್ ‘ಕ’ಮಿಷನ್...! ಕಾಮಗಾರಿ ಅಪೂರ್ಣ-ಹಸ್ತಾಂತರದಲ್ಲಿ ಅಕ್ರಮ

MASALI GP JJM
ಇಂಡಿ ತಾಲೂಕಿನ ಮಸಳಿ ಬಿಕೆ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಯ ದುಸ್ತಿತಿ.
Published on

ವಿಜಯಪುರ: ಮನೆ-ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜಲ ಜೀವನ್ ಮಿಷನ್ ಯೋಜನೆಯಡಿ ಬ್ರಹ್ಮಾಂಡ ಭ್ರಷ್ಟಾಚಾರ ಕಂಡು-ಕೇಳಿ ಬಂದ ಬೆನ್ನಲ್ಲೇ ಇದೀಗ ಅವೈಜ್ಞಾನಿಕವಾಗಿಯೂ, ನಿಯಮ ಬಾಹಿರವಾಗಿಯೂ ತರಾತುರಿಯಲ್ಲಿ ಅಪೂರ್ಣ ಕಾಮಗಾರಿಗಳನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುತ್ತಿರುವುದು ಕಂಡು ಬಂದಿದೆ.

ಇಂಡಿ ತಾಲೂಕಿನ ಮಸಳಿ ಬಿಕೆ ಗ್ರಾಮದಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣವಾಗಿದ್ದರೂ ನಿಯಮಬಾಹಿರವಾಗಿ ಹಸ್ತಾಂತರಿಸಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಉಪ ವಿಭಾಗಾಧಿಕಾರಿಗಳಿಗೆ ಲಿಖಿತವಾಗಿ ದೂರು ಸಲ್ಲಿಸಿದರೂ ಸಂಬಂಧಿಸಿದ ಅಧಿಕಾರಿ ತೋರುತ್ತಿರುವ ನಿರ್ಲಕ್ಷೃತನ, ಬೇಜವಾಬ್ದಾರಿತನ ಹಾಗೂ ಉದಾಸೀನತೆ ಭ್ರಷ್ಟಾಚಾರದ ಗುಮಾನಿ ಹುಟ್ಟಿಸಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಂದ ಹಿಡಿದು ಜಿಲ್ಲಾ ಮಟ್ಟದ ಅಧಿಕಾರಿಗಳವರೆಗೆ ಎಲ್ಲ ಹಂತದ ಅಧಿಕಾರಿಗಳು ಭ್ರಷ್ಟಾಚಾರದ ಪಾಲುದಾರರು ಎಂಬ ಸಾರ್ವಜನಿಕರ ಆರೋಪ ನಿಜವೆನ್ನಿಸುತ್ತಿದೆ.

ಕಳೆದ ಮಾರ್ಚ್ 8 ರಂದು ‘ಇಂಡಿ ಕ್ಷೇತ್ರದಲ್ಲಿ ನೆಲಕಚ್ಚಿದ ಜೆಜೆಎಂ’ ಎಂಬ ತಲೆ ಬರಹದಡಿಯಲ್ಲಿ ‘ವಿಜಯವಾಣಿ’ ಹಿರೇಮಸಳಿಯಲ್ಲಾದ ಜೆಜೆಎಂ ಅಕ್ರಮಕ್ಕೆ ಸಂಬಂಧಿಸಿದಂತೆ ವಿಶೇಷ ವರದಿ ಪ್ರಕಟಿಸಿತ್ತು. ಅದಾದ ಬಳಿಕ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲೇ ಇಲ್ಲ. ಇದೀಗ ಏಕಾಏಕಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಿದ್ದು, ಭ್ರಷ್ಟಾಚಾರದ ಗುಮಾನಿಗೆ ಕಾರಣವಾಗಿದೆ. ಅಲ್ಲದೇ, ಈ ಬಗ್ಗೆ ಈಗಲೂ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆಯಾಗಲಿ, ಕ್ರಮವಾಗಲಿ ಕೈಗೊಳ್ಳದಿರುವುದು ಭ್ರಷ್ಟಾಚಾರಕ್ಕೆ ಪುಷ್ಠಿ ನೀಡುತ್ತಿದೆ.

ಒಟ್ಟು 8325 ಜನಸಂಖ್ಯೆ ಹೊಂದಿರುವ ಮಸಳಿ ಬಿಕೆ ಗ್ರಾಮದಲ್ಲಿ ಒಂದು ಜನವಸತಿ ಒಳಗೊಂಡು ಯೋಜನೆ ರೂಪಿಸಲಾಗಿತ್ತು. ಗೊಲ್ಲರ ಓಣಿ, ಹೊಸೂರು, ಸಂಗೋಗಿ ಕೆರೆ, ಗೊರನಾಳದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಸೇರಿದಂತೆ 12 ಕಡೆ ಜಲ ಮೂಲಗಳನ್ನು ಗುರುತಿಸಿ ಆರಂಭದಲ್ಲಿ 1665 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸುವ ಯೋಜನೆ ರೂಪಿಸಲಾಗಿತ್ತು. ಇದೀಗ 2025 ಆ.17ರವರೆಗಿನ ಮಾಹಿತಿ ಪ್ರಕಾರ 254 ಟ್ಯಾಪ್ ಸಂಪರ್ಕಗಳನ್ನು ಕಲ್ಪಿಸಲಾಗಿದ್ದು, 1411 ಮನೆಗಳು ಬಾಕಿ ಇವೆ ಎಂದು ತಂತ್ರಾಂಶ ಹೇಳುತ್ತಿದ್ದರೆ ಅಧಿಕಾರಿಗಳು ಮಾತ್ರ ಯಾವುದೇ ಮಾಹಿತಿ ಬಿಟ್ಟುಕೊಡದಿರುವುದು ಒಂದು ಭಾಗವಾದರೆ ಗ್ರಾಮ ಪಂಚಾಯಿತಿ ಸದಸ್ಯರ ಗಮನಕ್ಕೂ ಬಾರದಂತೆ ಮುಗುಮ್ಮಾಗಿ ಕಾಮಗಾರಿ ಹಸ್ತಾಂತರಿಸಿಕೊಂಡಿರುವುದರ ಹಿಂದೆ ಹಗರಣ ಮತ್ತು ಭ್ರಷ್ಟಾಚಾರ ಎದ್ದು ಕಾಣುತ್ತಿದೆ.

ಕಾಮಗಾರಿ ಅಪೂರ್ಣವಾಗಿಯೂ, ಅವೈಜ್ಞಾನಿಕವಾಗಿಯೂ ಆಗಿದೆ ಎಂಬುದಕ್ಕೆ ಅಗೆದು ಬಿಟ್ಟಿರುವ ಸಿಸಿ ರಸ್ತೆಗಳು ಸಾಕ್ಷಿ ನುಡಿಯುತ್ತಿವೆ. ಯೋಜನೆಯಲ್ಲಿ ಅಗೆದ ಸಿಸಿ ರಸ್ತೆಗಳನ್ನು ಮೊದಲಿನಂತೆ ಮಾಡಬೇಕೆಂಬ ನಿಯಮವಿದೆ. ಆದರೆ, ಸಿಸಿ ರಸ್ತೆ ಸಮರ್ಪಕವಾಗಿ ದುರಸ್ಥಿಗೊಳಿಸಿಲ್ಲವೆಂದು ಗ್ರಾಮಸ್ಥರು ಲಿಖಿತವಾಗಿ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೂಡಲೇ ತನಿಖೆ ಕೈಗೊಳ್ಳಬೇಕಲ್ಲದೇ ಸದಸ್ಯರ ಒಪ್ಪಿಗೆ ಇಲ್ಲದೇ ಕಾಮಗಾರಿ ಹಸ್ತಾಂತರ ಮಾಡಿಕೊಂಡಿರುವ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಆಶಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net