

ಬಂಟ್ವಾಳ: ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟುವಿನಲ್ಲಿ ನೀರು ಸಂಗ್ರಹಣೆಗಾಗಿ ಗೇಟ್ ಅಳವಡಿಸಿದ ಪರಿಣಾಮ, ಸ್ಥಳೀಯ ಕೃಷಿಕರ ತೋಟಗಳಿಗೆ ನೀರು ನುಗ್ಗಿದ ಘಟನೆಗೆ ಸಂಬಂಧಿಸಿದಂತೆ ಶಾಸಕ ರಾಜೇಶ್ ನೈಾಕ್ ಉಳಿಪ್ಪಾಡಿಗುತ್ತು ಅವರು ಸ್ಥಳಕ್ಕೆ ಅಧಿಕಾರಿಗಳೊಂದಿಗೆ ಆಗಮಿಸಿ ಗೇಟ್ ತೆರವು ಮಾಡಿಸಿ, ಸಮಸ್ಯೆಗೆ ಮುಕ್ತಿ ದೊರಕಿಸಿದ್ದಾರೆ.
ಅಣೆಕಟ್ಟಿನ 21 ಗೇಟ್‌ಗಳನ್ನು ಈಗಾಗಲೇ ಅಳವಡಿಸಿ, ಸುಮಾರು 5 ಮೀ.ನಷ್ಟು ನೀರು ಶೇಖರಣೆಯಾಗಿತ್ತು. ನೇತ್ರಾವತಿ ನದಿಯಲ್ಲಿ ನೀರು ತುಂಬಿ ಹಚ್ಚಹಸಿರು ಕಾಣತೊಡಗಿದಂತೆ ಇತ್ತ ನದಿ ಭಾಗದ ತಗ್ಗು ಪ್ರದೇಶವಾದ ಮಣಿಹಳ್ಳ, ಪಣೆಕಲ ಹೀಗೆ ಕೆಲವು ಕಡೆಗಳಲ್ಲಿ ಅಡಕೆ ತೋಟಗಳಿಗೆ ನೀರು ನುಗ್ಗಿದ್ದು, ಸುಮಾರು ಒಂದೂವರೆ ಅಡಿಯಷ್ಟು ನೀರು ತೋಟದಲ್ಲಿ ಶೇಖರಣೆಯಾಗಿತ್ತು. ಅಡಕೆ ತೋಟದಲ್ಲಿ ನಿರಂತರ ಮೂರು ತಿಂಗಳ ಕಾಲ ನೀರು ನಿಂತರೆ ಮರಗಳು ಸಾಯುವುದು ನಿಶ್ಚಿತ ಎಂಬ ಆತಂಕ ಕೃಷಿಕರಿಗೆ ಉಂಟಾಗಿತ್ತು.
ಜಕ್ರಿಬೆಟ್ಟುವಿನಲ್ಲಿರುವ ಕಿಂಡಿ ಅಣೆಕಟ್ಟಿನಲ್ಲಿ ಪ್ರಾಯೋಗಿಕವಾಗಿ ನೀರು ನಿಲ್ಲಿಸಿದ ಸಂದರ್ಭ ಕೃಷಿಕರ ತೋಟಗಳಿಗೆ ನೀರು ನುಗ್ಗಿದ್ದು ಶಾಸಕರು ಸೋಮವಾರ ಮಂಗಳೂರಿನಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ಸಮಸ್ಯೆಯ ಬಗ್ಗೆ ಪ್ರಸ್ತಾಪ ಮಾಡಿದ್ದರು.
ಸಭೆ ಮುಗಿದ ಬಳಿಕ ಶಾಸಕರು ಇಲಾಖೆಯ ಅಧಿಕಾರಿಗಳೊಂದಿಗೆ ನೇರವಾಗಿ ಜಕ್ರಿಬೆಟ್ಟು ಕಿಂಡಿ ಅಣೆಕಟ್ಟಿನ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶಾಸಕರು ಭೇಟಿ ನೀಡಿದ ಸಂದರ್ಭ ಸಂತ್ರಸ್ತ ರೈತರು ಕೂಡ ಸ್ಥಳದಲ್ಲಿದ್ದು, ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದರು. ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕ ರಾಜೇಶ್ ನೈಾಕ್ ನೀರಿನ ಮಟ್ಟವನ್ನು ಕಡಿಮೆಗೊಳಿಸಲು ಕನಿಷ್ಠ ಗೇಟ್‌ಗಳನ್ನು ತೆರವು ಮಾಡಲು ಸೂಚನೆ ನೀಡಿದರು.
ಪುರಸಭಾ ಸದಸ್ಯರಾದ ಎ.ಗೋವಿಂದ ಪ್ರಭು, ಬಿಜೆಪಿ ಪ್ರಮುಖರಾದ ಜಗದೀಶ್ ಚೆಂಡ್ತಿಮಾರ್, ಸುದರ್ಶನ ಬಜ, ಕಾರ್ತಿಕ್ ಬಲ್ಲಾಳ್, ಸಣ್ಣ ನೀರಾವರಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಸಯ್ಯದ್ ಅತಿಕೋಡ್, ಎಇಇ ಸಾಜುದ್ದೀನ್, ಸಹಾಯಕ ಇಂಜಿನಿಯರ್‌ಗಳಾದ ರಾಕೇಶ್, ಶಿವಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.
21ರಲ್ಲಿ 7 ಗೇಟ್ ಓಪನ್
ನೀರು ಸಂಗ್ರಹಣೆಗಾಗಿ ಒಟ್ಟು ಅಳವಡಿಸಲಾದ 21 ಗೇಟ್‌ಗಳ ಪೈಕಿ 7ಗೇಟ್‌ಗಳನ್ನು ಶಾಸಕರ ಸೂಚನೆಯಂತೆ ತೆರವು ಮಾಡಲಾಯಿತು. ಇದೀಗ 7 ಗೇಟ್‌ಗಳಲ್ಲಿ ನೀರು ತುಂಬೆ ಡ್ಯಾಂಗೆ ನೀರು ಹರಿಯುತ್ತಿದ್ದು, ನೀರಿನ ಮಟ್ಟ 5 ಮೀ.ನಿಂದ 4 ಮೀ. ಗೆ ಇಳಿದಿದೆ. ನೀರು ಶೇಖರಣೆಯ ಮಟ್ಟ ಕಡಿಮೆಯಾದ ಕೂಡಲೇ ನದಿ ಬದಿಯ ಕೃಷಿಕರ ಅಡಕೆ ತೋಟಗಳಲ್ಲಿ ನಿಂತಿದ್ದ ನೀರು ಇಳಿದು ನದಿಯನ್ನು ಸೇರಿದೆ ಎಂದು ಕೃಷಿಕರು ಹೇಳಿದ್ದಾರೆ. ಶಾಸಕರ ಸಮಯೋಚಿತ ಕ್ರಮದಿಂದ ಕೃಷಿಕರ ಮೊಗದಲ್ಲಿ ಸಂತಸ ಮೂಡಿದೆ.