ಜಕ್ರಿಬೆಟ್ಟು ಡ್ಯಾಂ ಸಾಮರ್ಥ್ಯ ಪರೀಕ್ಷೆ : 24 ಗಂಟೆ ಕುಡಿಯುವ ನೀರು ಪೂರೈಕೆಗೆ ಅನುಕೂಲ

dam
ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿರುವ ನೂತನ ಡ್ಯಾಂನಲ್ಲಿ ಪ್ರಾಯೋಗಿಕವಾಗಿ ಸಾಮರ್ಥ್ಯ ಪರೀಕ್ಷೆ ನಡೆಸಲಾಯಿತು.
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಜಕ್ರಿಬೆಟ್ಟುವಿನಲ್ಲಿ ನೇತ್ರಾವತಿ ನದಿಗೆ ನಿರ್ಮಿಸಿದ ನೂತನ ಡ್ಯಾಂನಲ್ಲಿ ಶುಕ್ರವಾರ ಗೇಟ್ ಅಳವಡಿಸಿ ಬಳಿಕ ನೀರು ಶೇಖರಣೆ ಮಾಡಿ ಪ್ರಾಯೋಗಿಕ ಸಾಮರ್ಥ್ಯ ಪರೀಕ್ಷೆ ನಡೆಸಲಾಯಿತು.

ಕಾರ್ಯಪಾಲಕ ಇಂಜಿನಿಯರ್ ಸಯ್ಯದ್ ಅತಿಕುರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಜಯ್ ಶೆಟ್ಟಿ ಮತ್ತು ಸಹಾಯಕ ಇಂಜಿನಿಯರ್ ಶಿವಪ್ರಸನ್ನ ಡ್ಯಾಂಗೆ ವರ್ಟಿಕಲ್ ಲಿಫ್ಟ್ ಗೇಟ್ ಅಳವಡಿಸಿ ಸುಮಾರು 4.50 ಮೀ ಎತ್ತರಕ್ಕೆ ನೀರು ಶೇಖರಣೆಗೊಳಿಸಿ, ಗುಣಮಟ್ಟದ ಜತೆ ಸಾಮರ್ಥ್ಯ ಪರಿಶೀಲಿಸಿದರು.

ನೂತನ ಡ್ಯಾಂ ಹಾಗೂ ಸೇತುವೆ ನಿರ್ಮಾಣದಿಂದ ಜಕ್ರಿಬೆಟ್ಟು ರಾಷ್ಟ್ರೀಯ ಹೆದ್ದಾರಿಯಿಂದ ನರಿಕೊಂಬು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಯೋಜನೆ ಜತೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಜನರಿಗೆ ದಿನದ 24 ಗಂಟೆ ಕುಡಿಯುವ ನೀರು ಒದಗಿಸಲು ಸಹಕಾರಿಯಾಗಲಿದೆ. ಇದಲ್ಲದೆ ಜಕ್ರಿಬೆಟ್ಟುವಿನಿಂದ ಸುಮಾರು 5 ಕಿ.ಮೀ ಉದ್ದಕ್ಕೆ ಅಂದರೆ ಎ.ಎಂ.ಆರ್.ಡ್ಯಾಂ ತನಕ ನೀರು ಸಂಗ್ರಹಿಸುವ ಮೂಲಕ ನೇತ್ರಾವತಿ ನದಿಯ ಇಕ್ಕೆಲಗಳ ಕೃಷಿ ಭೂಮಿಗೆ ನೀರುಣಿಸಲು ಸಹಕಾರಿಯಾಗಲಿದೆ.

135 ಕೋಟಿ ರೂ.ವೆಚ್ಚ

ಸಣ್ಣ ನೀರಾವರಿ ಇಲಾಖೆಯ ವತಿಯಿಂದ 135 ಕೋಟಿ ರೂ. ವೆಚ್ಚದಲ್ಲಿ ನೇತ್ರಾವತಿ ನದಿಗೆ ನಿರ್ಮಾಣಗೊಂಡ ಡ್ಯಾಂ ಹಾಗೂ ಬ್ಯಾರೇಜ್ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟು 23 ಪಿಲ್ಲರ್‌ಗಳಿದ್ದು, 351.25 ಮೀ ಉದ್ದ, 7.5 ಅಗಲದಲ್ಲಿ ನಿರ್ಮಾಣವಾದ ಡ್ಯಾಂನಲ್ಲಿ ಐದುವರೆ ಮೀ ಎತ್ತರಕ್ಕೆ ನೀರು ಸಂಗ್ರಹಣೆ ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net