ಮತದಾನ ಮಾಡಲು ಒಪ್ಪಿದ ಜಕ್ಕಣಕ್ಕಿ ಗ್ರಾಮಸ್ಥರು

bhr visit
ಎನ್.ಆರ್.ಪುರ ತಹಸೀಲ್ದಾರ್ ಎಂ.ಎಸ್.ರಮೇಶ ಅವರು ಜಕ್ಕಣಕ್ಕಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಪಿಎಸ್‌ಐ ರವೀಶ್, ನಾಗೇಂದ್ರ, ಮಂಜು ಇತರರಿದ್ದರು.
Published on

ಬಾಳೆಹೊನ್ನೂರು: ಬನ್ನೂರು ಗ್ರಾಮ ಪಂಚಾಯಿತಿ ಜಕ್ಕಣಕ್ಕಿ ಗ್ರಾಮಸ್ಥರು ರಸ್ತೆ ನಿರ್ಮಾಣದ ಬೇಡಿಕೆ ಮುಂದಿಟ್ಟು ಮತದಾನ ಬಹಿಷ್ಕರಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದ ಹಿನ್ನೆಲೆಯಲ್ಲಿ ಬುಧವಾರ ಎನ್.ಆರ್.ಪುರ ತಹಸೀಲ್ದಾರ್ ಎಂ.ಎಸ್.ರಮೇಶ ಅವರು ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿದರು.

ಜಕ್ಕಣಕ್ಕಿಯಲ್ಲಿ ಸುಮಾರು 10 ಆದಿವಾಸಿ ಹಸಲರ ಕುಟುಂಬಗಳಿದ್ದು, ಇಲ್ಲಿನ ಮನೆಗಳಿಗೆ ತೆರಳಲು ಸಮರ್ಪಕ ರಸ್ತೆ ಇಲ್ಲ. ರಸ್ತೆಗೆ ಕಾಂಕ್ರೀಟ್ ಅಥವಾ ಡಾಂಬರೀಕರಣ ಮಾಡಿಕೊಡುವಂತೆ ಹಲವು ಬಾರಿ ಗ್ರಾಪಂ, ಶಾಸಕರು, ತಹಸೀಲ್ದಾರ್‌ಗೆ ಕೋರಿದ್ದರೂ ಸ್ಪಂದಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಕ್ಕಣಕ್ಕಿ ಗ್ರಾಮದ 10 ಆದಿವಾಸಿ ಕುಟುಂಬಗಳು ಲೋಕಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಿದ್ದವು. ಈ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸುವಂತೆ ರಾಜ್ಯ ಮುಖ್ಯಚುನಾವಣಾಧಿಕಾರಿ ಕಚೇರಿಯಿಂದ ತಹಸೀಲ್ದಾರ್‌ಗೆ ಸೂಚಿಸಲಾಗಿತ್ತು.
ಬುಧವಾರ ತಹಸೀಲ್ದಾರ್ ಎಂ.ಎಸ್.ರಮೇಶ ಅವರು ಜಕ್ಕಣಕ್ಕಿ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು. ಮತದಾನ ಬಹಿಷ್ಕಾರ ಕೈಬಿಡಬೇಕು ಎಂದು ಮನವಿ ಮಾಡಿದರು. ಈ ಕುರಿತು ಮಾತುಕತೆ ನಡೆಸಲು ತಹಸೀಲ್ದಾರ್ ಕಚೇರಿಗೆ ಗ್ರಾಮಸ್ಥರನ್ನು ಆಹ್ವಾನಿಸಿದರು. ಬಳಿಕ ಗ್ರಾಮಸ್ಥರು ಚುನಾವಣಾ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿದರು.
ಬಾಳೆಹೊನ್ನೂರು ಪಿಎಸ್‌ಐ ರವೀಶ್, ನಾಡಕಚೇರಿ ಉಪ ತಹಸೀಲ್ದಾರ್ ನಾಗೇಂದ್ರ, ಕಂದಾಯ ನಿರೀಕ್ಷಕ ಮಂಜು, ವಿಎ ನವೀನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net