ಕಾಫಿ ನಾಡಲ್ಲಿ ಮಳೆಗೆ ಇಬ್ಬರ ಬಲಿ

6 ckm 2
Published on

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಆಶ್ಲೇಷಾ ಅಬ್ಬರ ಮುಂದುವರಿದಿದ್ದು, ಇಬ್ಬರು ರೈತರು ಮೃತಪಟ್ಟಿದ್ದಾರೆ. ಕಡೂರು ಜಕ್ಕನಹಳ್ಳಿಯಲ್ಲಿ ಬೋರ್​ವೆಲ್​ಗೆ ಸಂಪರ್ಕ ಕಲ್ಪಿಸಲು ಹಾಕಿದ್ದ ವಿದ್ಯುತ್ ತಂತಿ ಮಳೆಗಾಳಿಗೆ ತುಂಡಾಗಿ ಬಿದ್ದಿದ್ದು, ಈ ತಂತಿ ತುಳಿದ ಜಕ್ಕನಹಳ್ಳಿಯ ರೈತ ಪರಮೇಶ್ವರಪ್ಪ (38) ಮೃತಪಟ್ಟಿದ್ದಾರೆ. ಬಾಳೆಹೊನ್ನೂರು ಸಮೀಪದ ಅಂಡವಾನೆ ಗದ್ದೆಮನೆಯ ಶಂಕರ (40) ಕೃಷಿ ಕಾರ್ಯಕ್ಕೆ ಗದ್ದೆಗೆ ತೆರಳಿದ್ದಾಗ ಕಾಲುಜಾರಿ ಗದ್ದೆಯಲ್ಲಿ ತುಂಬಿದ್ದ ನೀರಲ್ಲಿ ಮುಳುಗಿ ಅಸುನೀಗಿದ್ದಾರೆ.

ಚಾರ್ವಡಿ ಘಾಟ್​ನ ಹೆದ್ದಾರಿಯಲ್ಲಿ ಹಲವೆಡೆ ಭೂಕುಸಿದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಿಡಬ್ಲ್ಯುಡಿಯಿಂದ ಮಣ್ಣು ತೆರವುಗೊಳಿಸಿ ಮಿನಿ ಬಸ್, ಲಘುವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಕಳೆದ ಬಾರಿ ಗುಡ್ಡ ಕುಸಿದ ಚನ್ನಡ್ಲು ಪ್ರದೇಶದಲ್ಲಿ ಈ ಬಾರಿಯು ಭೂಮಿ ಕುಸಿದು ಚನ್ನಡ್ಲು-ಬಾಳೆಹೊಳೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ತರೀಕೆರೆಯಲ್ಲಿ ಮೂರು ಎಕರೆಗೂ ಹೆಚ್ಚಿನ ಮೆಕ್ಕೆಜೋಳ ಗಾಳಿಮಳೆಗೆ ಹಾನಿಗೀಡಾಗಿದೆ. ಮರಗಳು ಬಿದ್ದು 10ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ. ಮೂಡಿಗೆರೆ ತಾಲೂಕಿನಲ್ಲೇ 400 ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮೂಡಿಗೆರೆ ತಾಲೂಕಿನ ಮಳೆಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಭೇಟಿ ನೀಡಿ ವೀಕ್ಷಿಸಿದರು.

ಮಲೆನಾಡಿನಲ್ಲಿ ಮಳೆ ಆರ್ಭಟಕ್ಕೆ ಮೂಡಿಗೆರೆ, ಕಳಸ, ಕೊಪ್ಪ ತಾಲೂಕಿನ ವಿವಿಧೆಡೆ ಭೂಮಿ ಕುಸಿದಿದೆ. ಹಲವೆಡೆ ಮೂರು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಚಾರ್ವಡಿಯಲ್ಲಿ ಹೆದ್ದಾರಿಗೆ ಗುಡ್ಡ ಜರಿದಿದೆ.

ತುಂಗಾ ನದಿ ಉಕ್ಕಿಹರಿದು ಶೃಂಗೇರಿಯ ಗಾಂಧಿ ಮೈದಾನ ಮುಳುಗಿದೆ. ತಾಲೂಕಿನ ಸಂಕ್ಲಾಪುರದಲ್ಲಿ ಮರಬಿದ್ದು ಮನೆಯೊಂದು ಜಖಂಗೊಂಡಿದೆ. ಭದ್ರಾ ನದಿ ಉಕ್ಕಿಹರಿದು ಬಾಳೆಹೊನ್ನೂರು ಸಂತೆ ಮೈದಾನ, ಅಕ್ಕಪಕ್ಕದ ಅಡಕೆ ತೋಟ, ಬಾಳೆ ತೋಟ ಹಾಗೂ ಗದ್ದೆಗಳು ಜಲಾವೃತವಾಗಿವೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ತುಂಗಾ, ಭದ್ರಾ, ಹೇಮಾವತಿ ನದಿ ಪಾತ್ರದ ಜನರಿಗೆ ಮುನ್ನೆಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚನೆ ನೀಡಿದೆ.

ಮಳೆ ಅಬ್ಬರಕ್ಕೆ ಕಳಸ-ಹೊರನಾಡಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಗುರುವಾರ ಮಳೆ ಕೊಂಚ ಬಿಡುವು ನೀಡಿದೆ. ಬೆಳಗ್ಗೆ ನಗರದಲ್ಲಿ ಕೆಲಕಾಲ ಬಿಸಿಲು ಕಂಡುಬಂತು. ಹೊನ್ನಮ್ಮನಹಳ್ಳದ ಬಳಿ ಎರಡುಕಡೆ ಗುಡ್ಡ ಜರಿದಿದ್ದು ಸಂಚಾರಕ್ಕೆ ಯಾವುದೇ ಅಡಚಣೆಯಾಗಿಲ್ಲ. ರಸ್ತೆ ಬದಿ ನೀರು ಹರಿಯಲು ಜೆಸಿಬಿಯಿಂದ ಮಣ್ಣು ತೆರವುಗೊಳಿಸಲಾಯಿತು.

ಕೈಮರ ಎನ್​ಎಂಡಿಸಿ ಬಳಿ ಮರ ಬಿದ್ದು ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಮೆಸ್ಕಾಂ ಸಿಬ್ಬಂದಿ ಕಂಬ ಹಾಗೂ ಮರ ತೆರವುಗೊಳಿಸಿದರು. ಪ್ರವಾಸಿ ತಾಣಗಳಿಗೆ ಬರದಂತೆ ಜಿಲ್ಲಾಡಳಿತ ನಿಷೇಧಿಸಿದ್ದು, ಹೋಮ್್ಟೇ, ರೆಸಾರ್ಟ್​ಗಳಲ್ಲಿ ತಂಗಲು ಅನುಮತಿ ನೀಡಿದೆ.

ಮೂಡಿಗೆರೆ ತಾಲೂಕಿನ ಕುದ್ರೆಗುಂಡಿ ಬಳಿ ರಾ.ಹೆ.173ರಲ್ಲಿ ಬುಧವಾರ ರಾತ್ರಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದೆ. ರಾತ್ರಿ 3 ಗಂಟೆಯಿಂದ ವಾಹನ ಸಂಚಾರ ಸ್ಥಗಿತಗೊಂಡು ಹಲವರು ಪರದಾಡಬೇಕಾಯಿತು. ಬೆಳಗ್ಗೆ ಮರ ತೆರವು ಮಾಡಿ ಸಂಚಾರಕ್ಕೆ ಅನುವು ಮಾಡಲಾಯಿತು.

ಚಾರ್ಮಡಿಯಲ್ಲಿ ಭೂಕುಸಿತ: ನಿರಂತರ ಮಳೆಗೆ ಕೊಟ್ಟಿಗೆಹಾರದ ಮಲಯ ಮಾರುತ ವಿಶ್ರಾಂತಿ ಗೃಹದ ಸಮೀಪ, ಚಾರ್ಮಡಿ ಘಾಟಿ ರಸ್ತೆಯ ಹಲವೆಡೆ ಭೂಕುಸಿತ ಉಂಟಾಗಿ ದಕ್ಷಿಣ ಕನ್ನಡ ಜಿಲ್ಲೆ ಸಂಚಾರ ಸ್ಥಗಿತಗೊಂಡಿದೆ. ಮುಂಜಾನೆಯಿಂದಲೇ ಎರಡು ಜೆಸಿಬಿ ಮೂಲಕ ಮಣ್ಣು ತೆರವು ಕಾರ್ಯ ಭರದಿಂದ ನಡೆಸಿ ಬೆಳಗ್ಗೆ 8.30ರ ವೇಳೆಗೆ ಲಘುವಾಹನ ಹಾಗೂ ಮಿನಿ ಬಸ್​ಗಳ ಸಂಚಾರಕ್ಕೆ ಅನುವು ಮಾಡಲಾಯಿತು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಪಿಡಬ್ಲ್ಯುಡಿ ಸಿಬ್ಬಂದಿ ಮಣ್ಣು ತೆರವು ಕಾರ್ಯಾಚರಣೆ ನಡೆಸುವಾಗ ಸ್ಥಳೀಯರು ಸಾಥ್ ನೀಡಿದರು.

ಕಳೆದ ವರ್ಷದಲ್ಲಿ ಮಲೆನಾಡು ಭಾಗದಲ್ಲಿ ಗುಡ್ಡ ಜರಿದು ಭಾರಿ ಅನಾಹುತ ಸಂಭವಿಸಿದ್ದರಿಂದ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಅಲ್ಲಲ್ಲಿ ಜೆಸಿಬಿಗಳನ್ನು ಇರಿಸಿಕೊಂಡಿದ್ದು ಭೂ ಕುಸಿತ , ಮರ, ವಿದ್ಯುತ್ ಕಂಬಗಳು ಉರುಳಿ ಸಂಚಾರ ಸ್ಥಗಿತಗೊಂಡಲ್ಲಿ ಕೂಡಲೆ ತೆರವು ಕಾರ್ಯಕ್ಕಾಗಿ ಅಧಿಕಾರಿ ಮತ್ತು ಸಿಬ್ಬಂದಿಗೆ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net