ಸಂಭ್ರಮದ ಜಕ್ಕಲಿ ಕಲ್ಮೇಶ್ವರ ಜಾತ್ರೆ

28 nrgl 2
Published on

ನರೇಗಲ್ಲ: ಸಮೀಪದ ಜಕ್ಕಲಿ ಗ್ರಾಮದಲ್ಲಿ ಶ್ರೀ ಕಲ್ಮೇಶ್ವರ ದೇವರ ಹುಚ್ಚಯ್ಯ ತೇರು ನೂರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಸಂಭ್ರಮದಿಂದ ಜರುಗಿತು.

ಗ್ರಾಮದ ಮಹಿಳೆಯರು ಬೆಳಗ್ಗೆಯಿಂದ ಶ್ರೀ ಕಲ್ಮೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷವಾದ ಸಿಹಿ ಅಡುಗೆಯ ಎಡೆಯನ್ನು ದೇವರಿಗೆ ಅರ್ಪಿಸಿದರು. ದೇವಸ್ಥಾನದಲ್ಲಿ ವಿಶೇಷ ಪೂಜೆ, ಮಹಾರುದ್ರಾಭಿಷೇಕ ಸೇರಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ 1ರಿಂದ ಸಂಜೆ 5 ರವರೆಗೆ ದೇವಸ್ಥಾನ ಸಮಿತಿ ವತಿಯಿಂದ ಅನ್ನದಾಸೋಹ ನಡೆಯಿತು.

ಸಂಜೆ 5ಕ್ಕೆ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ನಂದಿಕೋಲು ತರಲಾಯಿತು. ಬಳಿಕ ಗ್ರಾಮದ ಶಿವಶರಣ ಅಣ್ಣಯ್ಯ-ತಮ್ಮಯ್ಯನವರ ಮನೆಯಿಂದ ಕಳಸ ತಂದು ಪೂಜಿಸಿ ತೇರಿಗೆ ಜೋಡಿಸಲಾಯಿತು. ಸಂಜೆ 6ಗಂಟೆಗೆ ಶಿವಶರಣರ ಮರಿ ಮೊಮ್ಮಕ್ಕಳು ಪೂಜೆ ಸಲ್ಲಿಸಿದ ಬಳಿಕ ತೇರು ಎಳೆಯಲು ಚಾಲನೆ ನೀಡಲಾಯಿತು. ಬೆಂಗಳೂರಿನಿಂದ ತರಿಸಲಾಗಿದ್ದ ವಿವಿಧ ಹೂವುಗಳಿಂದ ಅಲಂಕಾರಗೊಂಡಿದ್ದ ತೇರು ಸಾಗುತ್ತಿದ್ದಂತೆ ಭಕ್ತರು ದಾರಿಯುದ್ದಕ್ಕೂ ಶ್ರೀ ಕಲ್ಮೇಶ್ವರ ಮಹಾರಾಜ ಕೀ ಜೈ, ಹರ ಹರ ಮಹಾದೇವ ಎಂದು ಜಯ ಘೋಷಣೆ ಕೂಗಿ ಉತ್ತತ್ತಿ ಎಸೆದು ನಮಸ್ಕರಿಸಿದರು.

ಗ್ರಾಮದ ದುರ್ಗಾದೇವಿ ಹಾಗೂ ಬೀರದೇವರ ಡೊಳ್ಳಿನ ಮೇಳದವರ ಡೊಳ್ಳು ಕುಣಿತ ರಥೋತ್ಸವಕ್ಕೆ ಮೆರಗು ತಂದಿತು. ತೇರು ಮಾರ್ಗ ಮಧ್ಯದ ಶ್ರೀ ವೀರಭದ್ರೇಶ್ವರ ದೇವಸ್ಥಾನ ತಲುಪಿದ ಬಳಿಕ ಪುರವಂತರು ಶ್ರೀ ವೀರಭದ್ರೇಶ್ವರ ದೇವರ ಒಡುಪುಗಳನ್ನು ಹೇಳಿದರು. ಶ್ರೀ ಕಲ್ಮೇಶ್ವರ ದೇವಸ್ಥಾನದಿಂದ ಹೊರಟ ತೇರು ಗ್ರಾಮದ ಶ್ರೀ ಸಂಗಮೇಶ್ವರ ಗುಡಿ, ಶ್ರೀ ಹನುಮಂತದೇವರ ಗುಡಿ, ಗ್ರಾಮ ಚಾವಡಿ, ಶ್ರೀ ವೀರಭದ್ರೇಶ್ವರ ಗುಡಿ ಮೂಲಕ ಬಸ್ ನಿಲ್ದಾಣ ಹತ್ತಿರದ ಭೋರ್ಗಲ್‌ವರೆಗೆ ಸಾಗಿ ಮರಳಿ ಸ್ವ-ಸ್ಥಾನವನ್ನು ತಲುಪಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net