

ಚಳ್ಳಕೆರೆ: ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಯಲ್ಲಿ ಸಿಡಿಲು ಬಡಿದು 106 ಕುರಿಗಳು ಸಾವನ್ನಪ್ಪಿರುವ ಘಟನೆ ಜಾಜೂರು ಗ್ರಾಮದ ಕುರಿಹಟ್ಟಿಯಲ್ಲಿ ನಡೆದಿದೆ.
ಕುರಿಗಾಯಿ ಅಂಜಿನಪ್ಪ ಎಂಬುವರಿಗೆ ಸೇರಿದ 90, ಓಬಣ್ಣ ಎಂಬುವವರ 16 ಕುರಿಗಳು ಮೃತಪಟ್ಟಿವೆ. ಮಳೆ ಇಲ್ಲದೇ ಬರಗಾಲದ ಪರಿಸ್ಥಿತಿಯಲ್ಲಿ ಮಲೆನಾಡು ಸೀಮೆಯ ಕಡೆ ಪಡುವು ಹೋಗಿ ಸಣ್ಣ ಜೀವಗಳನ್ನು ಸಾಕಿಕೊಳ್ಳಲಾಗಿತ್ತು. ಸ್ವಲ್ಪ ಮಳೆಯಾಗಿ ನಮ್ಮ ಭಾಗದಲ್ಲೂ ಹುಲ್ಲು ಹಸಿರಾಗಿದೆ ಎಂದು ಊರಕಡೆ ಬರಲಾಗಿತ್ತು.
ಸಿಡಿಲಿಗೆ ಕುರಿಗಳು ಸಾವಿಗೀಡಾಗಿರುವುದು ಕುಟುಂಬಕ್ಕೆ ಆರ್ಥಿಕ ನಷ್ಟವಾಗಿದೆ. ಇನ್ನೇನು ಎರಡು ವಾರ ಶ್ರಾವಣ ಮುಗಿದು ಮಾರಮ್ಮನ ಜಾತ್ರೆ ಆರಂಭವಾದ ಕೂಡಲೇ ಸಾಕಿದ್ದ ಕುರಿಗಳಿಗೆ ಒಳ್ಳೆ ಬೇಡಿಕೆ ಇತ್ತು. ಕೈತುಂಬಾ ಹಣ ನೋಡಬೇಕಿದ್ದ ಸಮಯದಲ್ಲಿ ಕುರಿಗಳ ಸಾವು ಸಂಕಷ್ಟ ತಂದಿದೆ ಎಂದು ಅಂಜಿನಪ್ಪ, ಓಬಣ್ಣ ಅಳಲು ತೋಡಿಕೊಂಡಿದ್ದಾರೆ.
ತಹಸೀಲ್ದಾರ್ ರೆಹಾನಾ ಪಾಷಾ, ಪೊಲೀಸ್ ಉಪ ಅಧೀಕ್ಷಕ ಟಿ.ಬಿ.ರಾಜಣ್ಣ, ಕುರಿ ಜಿಲ್ಲಾ ಮಂಡಳಿ ಸಹಾಯ ನಿರ್ದೇಶಕ ಡಾ.ತಿಪ್ಪೇಸ್ವಾಮಿ, ಉಪ ನಿರ್ದೇಶಕ ಡಾ.ಕುಮಾರ್, ಸಹಾಯಕ ನಿರ್ದೇಶಕ ಡಾ.ಎಂ.ಎನ್.ರೇವಣ್ಣ, ಡಾ.ಶಿವಪ್ರಕಾಶ್, ಕಂದಾಯ ನಿರೀಕ್ಷಕ ರಾಜೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಸರ್ಕಾರ ಜಾರಿ ಮಾಡಿರುವ ಅನುಗ್ರಹ ಯೋಜನೆಯಡಿ ಕುರಿಗಾಯಿಗಳಿಗೆ ದೊರೆಯುವ 5 ಸಾವಿರ ಪರಿಹಾರದ ಹಣವನ್ನು ಪ್ರಾಕೃತಿಕ ವಿಕೋಪದಡಿಯ ಕಂದಾಯ ಇಲಾಖೆಯಿಂದ 4 ಸಾವಿರ ಮತ್ತು ಪಶು ಸಂಗೋಪನಾ ಇಲಾಖೆಯಿಂದ 1 ಸಾವಿರ ಸೇರಿಸಿ, ತಲಾ ಒಂದು ಕುರಿಗೆ 5 ಸಾವಿರದಂತೆ ಪರಿಹಾರ ವಿತರಣೆಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.