ಚಿಲ್ಲೂರ ಬಡ್ನಿ ಉಪಚುನಾವಣೆಯಲ್ಲಿ ಜೈತುನಬಿಗೆ ಗೆಲುವು

26-SVR-4- chillurbadni
Published on

ಸವಣೂರ: ತಾಲೂಕಿನ ಚಿಲ್ಲೂರ ಬಡ್ನಿ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ನಡೆದ ಮರು ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಿತು. ನೂತನ ಸದಸ್ಯರಾಗಿ ಜೈತುನಬಿ ಹುಸೇನ್ ಖಾನ ಪಠಾಣ ಆಯ್ಕೆಯಾದರು.

ಚುನಾವಣೆಯಲ್ಲಿ ಜೈತುನಬಿ ಹುಸೇನಖಾನ್ ಪಠಾಣ ಹಾಗೂ ನಜ್ಮಾಬಾನು ಹಜರತ್​ಅಲಿ ಬಸರಿಕಟ್ಟಿ ತಲಾ ಒಂದು ನಾಮಪತ್ರ ಸಲ್ಲಿದ್ದರು. ನ. 13ರಂದು ನಾಮಪತ್ರ ಪರಿಶೀಲನೆ ಬಳಿಕ ನ. 15ರಂದು ಯಾರೊಬ್ಬರೂ ನಾಮಪತ್ರ ಹಿಂಪಡೆಯದ ಹಿನ್ನೆಲೆಯಲ್ಲಿ ನ.23 ರಂದು ಮತದಾನ ನಡೆಯಿತು. ಒಟ್ಟು 991 ಮತದಾರರ ಪೈಕಿ 732 ಮತದಾರರು ತಮ್ಮ ಮತ ಚಲಾಯಿಸಿದ್ದರು.

ನ. 26ರಂದು ನಡೆದ ಮತ ಎಣಿಕೆ ಕಾರ್ಯದಲ್ಲಿ 37 ಮತಗಳು ತಿರಸ್ಕೃತಗೊಂಡವು. ಅಂತಿಮವಾಗಿ ಜೈತುನಬಿ ಹುಸೇನಖಾನ್ ಪಠಾಣ 392 ಮತಗಳನ್ನು ಪಡೆದು ಜಯಶಾಲಿಯಾದರು. ಪ್ರತಿಸ್ಪರ್ಧಿ ನಜ್ಮಾಬಾನು ಹಜರತ್​ಅಲಿ ಬಸರಿಕಟ್ಟಿ 303 ಮತಗಳನ್ನು ಪಡೆದು ಪರಾಭವಗೊಂಡರು.

ಚುನಾವಣಾ ಕಾರ್ಯದಲ್ಲಿ ಚುನಾವಣಾಧಿಕಾರಿ ವೀರಭದ್ರಪ್ಪ ಅಂತರಗೋಲಿ, ಸಹಾಯಕ ಚುನಾವಣಾಧಿಕಾರಿ ಮೊಹ್ಮದ ಜಾಫರ್ ರಾಯಚೂರ, ಉಪ ತಹಸೀಲ್ದಾರ್ ಆರ್.ವೈ. ಬೋಗಾರ, ನೂತನ ಸದಸ್ಯೆ ಜೈತುನಬಿ ಹುಸೇನಖಾನ್ ಪಠಾಣ ಅವರಿಗೆ ಪ್ರಮಾಣ ಪತ್ರ ವಿತರಿಸಿ ಶುಭ ಕೋರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net