

ನಾಗಮಂಗಲ: ನಾಡಿನ ಎಲ್ಲ ಧರ್ಮಗಳಿಗಿರುವಂತೆ ಜೈನಧರ್ಮಕ್ಕೂ ಇತಿಹಾಸವಿದ್ದು, ಇತರ ಧರ್ಮಗಳಿಗಿಂತ ಜೈನಧರ್ಮ ವಿಭಿನ್ನವಾಗಿರುವ ಜತೆಗೆ ಅಹಿಂಸೆಯ ತತ್ವ ಸಾರುವ ಮೂಲಕ ಶ್ರೇಷ್ಠ ಧರ್ಮವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತಸೌಧದ ಆವರಣದಲ್ಲಿ ತಾಲೂಕು ಆಡಳಿತದಿಂದ ಗುರುವಾರ ಆಯೋಜಿಸಿದ್ದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಾವೀರರ ಜಯಂತಿಯನ್ನು ಆಚರಣೆಗೆ ತಂದಿದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಾಗಿದೆ. ಸದಾ ನಿಮ್ಮ ಸಮಾಜದ ಜತೆಗಿರಲಿದೆ. ಜೈನ ಬಸದಿಗಳ ಹಲವು ಕುರುಹುಗಳು ತಾಲೂಕಿನಲ್ಲಿರುವುದು ಜೈನ ಸಮುದಾಯಕ್ಕಿರುವ ಇತಿಹಾಸವಾಗಿದೆ. ಬೇರೆ ಧರ್ಮಗಳಂತೆ ಜೈನ ಧರ್ಮಕ್ಕೂ ಒಂದು ಇತಿಹಾಸವಿದೆ. ಮಹಾವೀರ ಬುದ್ಧನ ಸಮಕಾಲೀನರು. ಶ್ರೀಮಂತಿಕೆ, ಕುಟುಂಬ, ಆಸ್ತಿ ಈ ಎಲ್ಲವನ್ನು ತ್ಯಜಿಸಿ ಧರ್ಮವನ್ನು ಸಾರುವಂತದ್ದು ಜೈನ ಧರ್ಮದಲ್ಲಿ ಮಾತ್ರ ಕಾಣಲು ಸಾಧ್ಯ. ಆದ್ದರಿಂದ ಈ ಧರ್ಮ ಒಂದು ಪ್ರತಿಷ್ಠಿತ ಧರ್ಮವಾಗಿದೆ ಎಂದು ತಿಳಿಸಿದರು.
ಅಹಿಂಸೆಯನ್ನು ಸಾರುವ ಏಕೈಕ ಧರ್ಮ ಜೈನಧರ್ಮವಾಗಿದೆ. ಮನುಷ್ಯನಿಗೆ ಮನಸು ಚಂಚಲವಾಗುವುದು ಸಾಮಾನ್ಯ, ಆದರೆ ಈ ಧರ್ಮದ ಧರ್ಮಪ್ರಚಾರಕರಿಗೆ ಆ ರೀತಿಯಲ್ಲಿಲ್ಲ. ದೇಶಕ್ಕೆ ಮಾತ್ರ ಧಾರ್ಮಿಕ ಇತಿಹಾಸವಿರುವುದು, ಬೇರೆ ಯಾವ ದೇಶಗಳಿಗಿಲ್ಲ. ನಾವು ಮಾಡುತ್ತಿರುವ ಅಷ್ಟೊಂದು ಕೆಟ್ಟ ಕೆಲಸಗಳಿಂದಲೂ ಇನ್ನು ಬದುಕಿದ್ದೇವೆ ಎಂದರೆ ಅನೇಕ ಋಷಿಗಳು, ಧರ್ಮಗುರುಗಳು ನಡೆದಾಡುತ್ತಿರುವುದರಿಂದ ಹಾಗೂ ಅವರ ಶಕ್ತಿಯಿಂದ ನಾವಿನ್ನು ಜೀವಂತವಾಗಿದ್ದೇವೆ. ಜೈನ ಧರ್ಮದ ಆಶಯವನ್ನು ಪ್ರತಿಯೊಬ್ಬರೂ ಎಲ್ಲ ಧರ್ಮದವರು ಅಳವಡಿಸಿಕೊಂಡರೆ ಒಳ್ಳೆಯದು. ಒಳ್ಳೆಯ ಅಂಶ ಯಾವ ಧರ್ಮಗಳಲ್ಲಿದ್ದರೂ ಅವುಗಳನ್ನು ಅಳವಡಿಸಿಕೊಳ್ಳಿ. ಸಿಎಂ ಜತೆ ಮಾತನಾಡಿ ಜೈನ ನಿಗಮ ಸ್ಥಾಪಿಸಲು ಕಾರ್ಯಪ್ರವೃತ್ತನಾಗುತ್ತೇನೆ ಎಂದರು.
ಹಿರಿಯ ಸಾಹಿತಿ ನಾ.ಸು.ನಾಗೇಶ್ ಅವರಿಗೆ ಮಹಾವೀರ ಶಾಂತಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಡಾ.ರತ್ನಾಕರ್ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ಕಂಬದಹಳ್ಳಿ ಜೈನಮಠದ ಶ್ರೀ ಭಾನುಕೀರ್ತಿಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು.
ನಾಗಮಂಗಲ ಪುರಸಭೆ ಅಧ್ಯಕ್ಷ ಅಲಿಅನ್ಸರ್ ಪಾಷ, ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್, ಬೆಳ್ಳೂರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಮ್ಮ ಮಹೇಶ್, ಮನ್ಮುಲ್ ನಿರ್ದೇಶಕ ಲಕ್ಷ್ಮೀನಾರಾಯಣ್, ತಹಸೀಲ್ದಾರ್ ಆದರ್ಶ್, ತಾ.ಪಂ.ಇಒ ಸತೀಶ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಇತರರು ಇದ್ದರು.