

ಹುಬ್ಬಳ್ಳಿ: ಜೈನ ಧರ್ಮದಲ್ಲಿ ಒಳಪಂಗಡಗಳಿದ್ದರೂ ಒಗ್ಗಟ್ಟು ಪ್ರದರ್ಶನ ತೋರಬೇಕು. ಇದು ನಮ್ಮ ಸಮುದಾಯಕ್ಕೆ ದೊಡ್ಡ ಶಕ್ತಿ. ಜಗತ್ತಿಗೆ ಮುಂದೊಂದು ದಿನ ಜೈನ ಧರ್ಮ ಅಗತ್ಯವಾಗಿ ಬೇಕು. ಯಾಕೆಂದರೆ ವಿಶ್ವಕ್ಕೆ ಬೇಕಿರುವುದು ಶಾಂತಿ ಮತ್ತು ಅಹಿಂಸೆ ಎಂದು ಧಾರವಾಡದ ಶ್ರೀ ಧರ್ಮಸ್ಥಳ ಮಂಜುನಾಥ ವಿಶ್ವವಿದ್ಯಾಲಯ ಉಪ ಕುಲಪತಿ ಡಾ. ನಿರಂಜನಕುಮಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಉತ್ತರ ಕರ್ನಾಟಕ ಜೈನ ಮಹಾಸಂಘದ ವತಿಯಿಂದ ಇಲ್ಲಿನ ರಾಮಕೃಷ್ಣ ನಗರದ ಮಾನಸಗಿರಿಯ ಮಹಾವೀರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜೈನ ಜಾಗೃತಿ ದ್ವಿತೀಯ ಮಹಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ದಿನಗಳು ಭಾರತದ್ದು. ನಮ್ಮ ಪರಂಪರೆ, ತತ್ತ್ವ ಎಲ್ಲ ಧರ್ಮೀಯರಿಗೂ ಅವಶ್ಯ. ಹಾಗಾಗಿ ಜೈನರು ಮತ್ತು ಅವರ ತತ್ವ ಕುರಿತು ಜಾಗೃತಿ ಮೂಡಿಸಬೇಕಿದೆ ಎಂದರು.
ಭಾರತ ಕಟ್ಟುವಲ್ಲಿ ನಮ್ಮ ಸಮಾಜ ಮುಂಚೂಣಿಯಲ್ಲಿದೆ. ಮಕ್ಕಳಿಗೆ ಜೈನ ಪರಂಪರೆ, ಇತಿಹಾಸ, ತತ್ವಗಳನ್ನು ಹೇಳಿಕೊಡಬೇಕು. ಬರೀ ಅಂಕ ಗಳಿಸುವುದಕ್ಕೆ ಸೀಮಿತಗೊಳಿಸಬಾರದು. ಉಪಯೋಗ, ವಿನಯ ಇಲ್ಲದ ವಿದ್ಯೆ ನಮ್ಮ ಮಕ್ಕಳಿಗೆ ಬೇಡವೇ ಬೇಡ ಎಂದರು.
ಮಹಾಸಂಘದ ಅಧ್ಯಕ್ಷ ಬಿ.ಎ. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಜೈನ ಸಮಾಜ ಸಂಘಟನೆ, ಧರ್ಮ ರಕ್ಷಣೆ ಹಾಗೂ ನ್ಯಾಯಾಕ್ಕಾಗಿ ಹೋರಾಟ ಮಾಡುವ ಉದ್ದೇಶದಿಂದ ಸಂಟನೆಯಲ್ಲಿ ತೊಡಗಿದ್ದೇವೆ. ನಮ್ಮ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸುವಂತೆ ಮನವಿ ಮಾಡಿದರು. ಅಲ್ಲದೇ ಸೌಜನ್ಯ ಕೊಲೆ ಪ್ರಕರಣ ಪ್ರಸ್ತಾಪಿಸಿದ ಅವರು, ಬೇಕಿದ್ದರೆ ಇನ್ನಷ್ಟು ತನಿಖೆ ನಡೆಯಲಿದೆ. ಆದರೆ, ಸುಖಾಸುಮ್ಮನೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಮೇಲೆ ಹಾಗೂ ದೈವಸ್ಥಳದ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.
ಜೈನ ಅಭಿವೃದ್ಧಿ ನಿಗಮ ಸ್ಥಾಪನೆ, ಜೈನ ಮುನಿಗಳ ರಕ್ಷಣೆ, ಚುನಾವಣೆಗಳಲ್ಲಿ ಜೈನರಿಗೆ ಮೀಸಲಾತಿ, ಸಮುದಾಯ ಭವನ ನಿರ್ಮಿಸಲು ನಿವೇಶನ ಹಾಗೂ ಅನುದಾನ ಸೇರಿ ವಿವಿಧ ಬೇಡಿಕೆ ಈಡೇರಿಸಲು ಠರಾವು ಪಾಸ್ ಮಾಡಲಾಯಿತು.
ಬಳ್ಳಾರಿ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಸಿದ್ದು ಅಲಗೂರ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಜೈನ ಜಾಗೃತಿ ಸ್ಮರಣ ಸಂಚಿಕೆ ಮತ್ತು ಜೈನ ಭಾರತ ಪುಸ್ತಕ ಬಿಡುಗಡೆ ಮಾಡಲಾಯಿತು.
ಧಾರವಾಡ ಎಸ್‌ಡಿಎಂ ಮೆಡಿಕಲ್ ಕಾಲೇಜ್ ಕೃತಕ ಕಾಲು ಜೋಡಣೆ ವಿಭಾಗದ ನಿರ್ದೇಶಕಿ ಪದ್ಮಲತಾ ನಿರಂಜನಕುಮಾರ, ಜೆಎಸ್‌ಎಸ್ ಕಾಲೇಜ್ ಪ್ರಾಚಾರ್ಯ ಡಾ. ಅಜಿತ ಪ್ರಸಾದ, ಮಹಾಸಂಘದ ಕಾರ್ಯಾಧ್ಯಕ್ಷ ಧರಣೇಂದ್ರ ಜವಳಿ, ಹೆಸ್ಕಾಂ ಆಡಳಿತ ವಿಭಾಗದ ಉಪ ಆಯುಕ್ತ ಡಾ. ಸಿದ್ದು ಹುಲ್ಲೊಳ್ಳಿ, ಶ್ರವಣಬೆಳಗೊಳದ ಎಸ್.ಎನ್. ಅಶೋಕ ಕುಮಾರ, ಆಲ್ ಇಂಡಿಯಾ ಜೈನ ಯೂಥ್ ಫೆಡರೇಷನ್ ಅಧ್ಯಕ್ಷ ಮಹೇಂದ್ರ ಸಿಂಘಿ, ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅನಿಲ ಚೌಗಲಾ, ವಿಮಲ ತಾಳಿಕೋಟೆ, ಅಜಿತ ಮುರಗೊಂಡಿ, ಮಂಜುನಾಥ ಜಕ್ಕಣ್ಣವರ, ಸೌರಭ ಚೋಪ್ರಾ, ಮಹಿಳಾ ಸಮಿತಿ ಅಧ್ಯಕ್ಷೆ ಭಾರತಿ ಛಬ್ಬಿ, ಡಾ. ನೀರಜಾ ನಾಗೇಂದ್ರಕುಮಾರ, ಡಾ.ಎಚ್.ಎ. ಪಾರ್ಶ್ವನಾಥ, ಎಸ್.ಆರ್. ಮಲ್ಲಸಮುದ್ರ ಇತರರು ಇದ್ದರು.