

ಕೆ.ಆರ್.ಪೇಟೆ: ತಾಲೂಕಿನ ಜೈನಹಳ್ಳಿಯ ಗ್ರಾಮ ದೇವತೆ ಸಿಡಿ ಹಬ್ಬವು ಮಾರ್ಚ್ 10 ಮತ್ತು 11ರಂದು ನಡೆಯಲಿದ್ದು, ಗ್ರಾಮದ ಶ್ರೀ ರಂಗಸ್ವಾಮಿ ಹಾಗೂ ಕಾರೇತಾಳಮ್ಮ (ಲಕ್ಷ್ಮೀದೇವಿ) ದೇವಸ್ಥಾನದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
10ರಂದು ಬೆಳಗ್ಗೆಯಿಂದಲೇ ನಾನಾ ಪೂಜಾ ಕೈಂಕರ್ಯ ಜರುಗಲಿವೆ. ಮಧ್ಯಾಹ್ನ 2ಗಂಟೆಗೆ ಗ್ರಾಮದ ಮಾವಿನ ತೋಪಿನಿಂದ ಹೂ- ಹೊಂಬಾಳೆಯೊಂದಿಗೆ ಸಿಂಗರಿಸಿದ ಕಾರೇತಾಳಮ್ಮ ದೇವರನ್ನು ತರಲಾಗುತ್ತದೆ. ನಂತರ ವಿವಿಧ ಕಲಾತಂಡಗಳೊಂದಿಗೆ ದೇವರನ್ನು ಇಡೀ ರಾತ್ರಿ ಗ್ರಾಮದ ಎಲ್ಲ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. 11 ರಂದು ಬೆಳಗ್ಗೆ 5ಗಂಟೆಗೆ ದೇವಸ್ಥಾನದಿಂದ ತೋಪಿನವರೆಗೆ ದೇವರ ಸಿಡಿ ಹರಿಯಲಿದೆ.
ಭಕ್ತರು ಈ ವೇಳೆ ಬಾಯಿಬೀಗ ಸೇರಿದಂತೆ ನಾನಾ ಹರಕೆಯನ್ನು ದೇವಿಗೆ ಅರ್ಪಿಸುವರು. ನಂತರ ತೋಪಿನಲ್ಲಿ ಕೊಂಡೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.