

ಹುಬ್ಬಳ್ಳಿ: ಭಾದ್ರಪದ ಮಾಸದ ಆರಂಭದೊಂದಿಗೆ ಸೆ. 15ರಿಂದ ಅಕ್ಟೋಬರ್ 1ರ ವರೆಗೆ ಹುಬ್ಬಳ್ಳಿ ದಿಗಂಬರ ಜೈನ್ ಸಮಾಜದ ವಿವಿಧ ಕಾರ್ಯಕ್ರಮಗಳು ಆರಂಭವಾಗಲಿವೆ.
ಸೆ. 15ರಿಂದ 16 ದಿನಗಳ ಷೋಡಶಕಾರಣ ವ್ರತ ವಿಧಾನ ನಡೆಯುವುದು. 20ನೇ ಶತಮಾನದ ಪ್ರಥಮ ಆಚಾರ್ಯ ಶಾಂತಿಸಾಗರ ಮಹಾರಾಜರ 68ನೇ ಪುಣ್ಯತಿಥಿ ನಿಮಿತ್ತ 17ರಂದು ಬೆಳಗ್ಗೆ 8.30ರಿಂದ ಶಾಂತಿನಾಥ ಭವನದಲ್ಲಿ ವಿಶೇಷ ಪೂಜೆ, ಅಷ್ಟಕ ಹಾಗೂ ನಿವೃತ್ತ ಉಪನ್ಯಾಸಕ ನೇಮಿಚಂದ್ರ ದಿಬ್ಬದ ಅವರಿಂದ ಆಚಾರ್ಯ ಸ್ಮರಣೆ ನಡೆಯಲಿದೆ.
ಸೆ. 18, 19, 20ರಂದು ನವಗ್ರಹ ತೀರ್ಥ ಪ್ರವರ್ತಕ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಸ್ವರ್ಣ ಜನ್ಮ ಜಯಂತಿ ಕಾರ್ಯಕ್ರಮಗಳಲ್ಲಿ ಶ್ರಾವಕ ಶ್ರಾವಕಿಯರು ಭಾಗಿಯಾಗುವರು.
ಸೆ. 20ರಂದು ಶಾಂತಿನಾಥ ಭವನದಲ್ಲಿ 11 ದಿನಗಳ ದಶಲಕ್ಷಣ ಸಂಗೀತಮಯ ಪೂಜಾ ವಿಧಾನ ಹಾಗೂ ಪ್ರವಚನ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಬೆಳಗ್ಗೆ 8.30ಕ್ಕೆ ಹೊಂಬುಜ ಮಠದ ಸ್ವಸ್ತಿಶ್ರೀ ದೇವೇಂದ್ರಕಿರ್ತಿ ಭಟ್ಟಾರಕರು ಉದ್ಘಾಟಿಸುವರು.
ನವಗ್ರಹ ತೀರ್ಥದ ಸ್ವಸ್ತೀಶ್ರಿ ಧರ್ಮಸೇನ ಭಟ್ಟಾರಕರು, ನರಸಿಂಹರಾಜಪುರದ ಸ್ವಸ್ತಿಶ್ರೀ ಲಕ್ಷ್ಮಿಸೇನಭಟ್ಟಾರಕರು, ಆರತಿಪುರದ ಸ್ವಸ್ತಿಶ್ರೀ ಸಿದ್ದಾಂತಕೀರ್ತಿ ಭಟ್ಟಾರಕರು, ಕೊಲ್ಲಾಪುರದ ಸ್ವಸ್ತಿಶ್ರೀ ಲಕ್ಷ್ಮಿಸೇನ ಭಟ್ಟಾರಕರು ಪಾಲ್ಗೊಳ್ಳುವರು.
ಈ ಅವಧಿಯಲ್ಲಿ ಹಲವಾರು ನೋಂಪಿ ವಿಧಾನಗಳು ನಡೆಯುವವು. ಅಕ್ಟೋಬರ್ 1ರಂದು ಬೆಳಗ್ಗೆ 11ಕ್ಕೆ ಶಾಂತಿನಾಥ ಭವನದಲ್ಲಿ ಪರ್ವಗಳ ಸಮಾರೋಪವು ಸೋಂದಾ ಮಠದ ಸ್ವಸ್ತಿಶ್ರೀ ಭಟ್ಟಾಕಳಂಕ ಭಟ್ಟಾರಕರ ಸಾನ್ನಿಧ್ಯದಲ್ಲಿ ನಡೆಯುವುದು.
ಕ್ಷಮಾವಳಿ, ವಿಶೇಷ ಪ್ರವಚನಗಳ ಜತೆಗೆ ವಿವಿಧ ವ್ರತ, ನೋಂಪಿ ಆಚರಿಸಿದ ಶ್ರಾವಕ ಶ್ರಾವಕಿಯರನ್ನು ಸನ್ಮಾನಿಸಲಾಗುವುದು.
ಜೈನ್ ಸಮಾಜ ಅಧ್ಯಕ್ಷ ರಾಜೇಂದ್ರ ಬೀಳಗಿ ಅಧ್ಯಕ್ಷತೆ ವಹಿಸುವರು. ಸಮಾಜದ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಳ್ಳುವರು ಎಂದು ಶಾಂತಿನಾಥ ಹೋತಪೇಟಿ ಅವರು ತಿಳಿಸಿದ್ದಾರೆ.