ಜೈನ ಮುನಿ ಕೊಲೆ ಪ್ರಕರಣ ಸಿಬಿಐಗೆ ವಹಿಸಲ್ಲ

h10-Gunadharnandi 2
Published on

ಹುಬ್ಬಳ್ಳಿ: ಚಿಕ್ಕೋಡಿ ಹಿರೇಕೂಡಿಯ ಜೈನಮುನಿ ಶ್ರೀಕಾಮಕುಮಾರನಂದಿ ಮಹಾರಾಜರ ಹತ್ಯೆ ಪ್ರಕರಣ ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಕರ್ನಾಟಕ ಪೊಲೀಸರು ಪ್ರಕರಣ ಭೇದಿಸಲು, ಸೂಕ್ತ ತನಿಖೆ ನಡೆಸಲು ಸಮರ್ಥವಾಗಿದ್ದಾರೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.

ತಾಲೂಕಿನ ವರೂರಿನ ಶ್ರೀ ನವಗ್ರಹ ತೀರ್ಥಕ್ಷೇತ್ರಕ್ಕೆ ಸೋಮವಾರ ಭೇಟಿ ನೀಡಿ ಶ್ರೀ ಗುಣಧರನಂದಿ ಸ್ವಾಮೀಜಿಗಳನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೊಲೆ ಪ್ರಕರಣದ ದಾರಿ ತಪ್ಪಿಸುತ್ತಿಲ್ಲ. ಸರಿಯಾದ ದಿಕ್ಕಿನತ್ತ ತನಿಖೆ ನಡೆಯುತ್ತಿದೆ. ಸಾಮಾನ್ಯ ಜನರಂತೆ ಜನನಾಯಕರು ಮಾತನಾಡಬಾರದು. ಉನ್ನತ ಸ್ಥಾನದಲ್ಲಿರುವವರು ಮಾತಿನ ಮೇಲೆ ಹಿಡಿತ ಹೊಂದಿರಬೇಕು. ಈ ಪ್ರಕರಣಕ್ಕೆ ರಾಜಕೀಯ ಬಣ್ಣ ಬಳಿಯಬಾರದು. ಇದರಲ್ಲಿ ಬೇಳೆ ಬೇಯಿಸಿಕೊಳ್ಳಬೇಡಿ. ಘಟನೆ ಹಿಂದೆ ಕಾಣದ ಕೈಗಳಿವೆ ಎಂದು ಮಾತನಾಡುವುದನ್ನು ನಿಲ್ಲಿಸಬೇಕು. ಕೃತ್ಯದ ಹಿಂದೆ ಇರುವವರು ಯಾರೆಂಬುದು ತನಿಖೆಯಿಂದ ಗೊತ್ತಾಗುತ್ತದೆ ಎಂದು ಹೇಳಿದರು.

ಇದು ಇತಿಹಾಸದಲ್ಲಿಯೇ ನೋಡದ ಹತ್ಯೆ. ಈಗಾಗಲೇ ಕೆಲವರನ್ನು ಬಂಧಿಸಿದ್ದು, ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಡಿವೈಎಸ್​ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ನಂತರ ಕೊಲೆಗೆ ಕಾರಣವಾದ ಅಂಶಗಳು ಬಯಲಿಗೆ ಬರಬಹುದು ಎಂದರು.

ನಿಮ್ಮ ಜತೆ ಸರ್ಕಾರ ಇದೆ. ಸ್ವಾಮೀಜಿಗಳು ಉಪವಾಸ ಸತ್ಯಾಗ್ರಹ ನಿಲ್ಲಿಸುವರು. ಜೈನ ಮುನಿಗಳು, ಸಾಧಿ್ವುರು ಯಾತ್ರೆ ಮಾಡುವ ವೇಳೆ ರಕ್ಷಣೆ ಕೊಡಲಾಗುವುದು. ಶಾಲಾ-ಕಾಲೇಜ್​ನಲ್ಲಿ ವಾಸ್ತವ್ಯ ಮಾಡುವ ಕುರಿತು ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರ ಜತೆಗೆ ರ್ಚಚಿಸಿ, ಆದೇಶ ಹೊರಡಿಸಲಾಗುವುದು. ಜೈನ ಅಭಿವೃದ್ಧಿ ಮಂಡಳಿ ಮಾಡುವ ಕುರಿತು ಮುಖ್ಯಮಂತ್ರಿಗಳ ಜತೆಗೆ ರ್ಚಚಿಸಲಾಗುವುದು. ಮೊದಲೇ ಹೇಳಿದ್ದರೆ ಬಜೆಟ್​ನಲ್ಲಿ ಪ್ರಕಟಿಸುತ್ತಿದ್ದೆವು. ಜೈನ ಮಂದಿರಗಳಿಗೆ ರಕ್ಷಣೆ ಕೊಡಲಾಗುವುದು ಎಂದು ಶ್ರೀಗಳು ಸಲ್ಲಿಸಿದ ಬೇಡಿಕೆಗಳಿಗೆ ಭರವಸೆ ನೀಡಿದರು.

ಮನಃ ಪರಿವರ್ತಿಸುವ ಶಿಕ್ಷಣ ಕೊಡಿ: ಶ್ರೀಗುಣಧರನಂದಿ ಸ್ವಾಮೀಜಿ ಮಾತನಾಡಿ, ಜೈನ ಮುನಿಗಳನ್ನು ಕೊಲೆ ಮಾಡಿದವರಿಗೆ ನಾನು ಕ್ಷಮಾದಾನ ಕೊಡುತ್ತೇನೆ. ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಗ್ರಹಿಸುವುದಿಲ್ಲ. ಬದಲಿಗೆ ಅವರಿಗೆ ಕಠಿಣ ಶಿಕ್ಷೆ ಎಂದರೆ ಮನಃಪರಿವರ್ತಿಸುವ ಶಿಕ್ಷಣ ನೀಡುವುದು. ಯಾಕೆಂದರೆ ಅವರಿಗೂ ಕುಟುಂಬವಿರುತ್ತದೆ ಎಂದರು.

ಜೈನ ಮುನಿಗಳ ಹತ್ಯೆಯನ್ನು ಪಕ್ಷಾತೀತವಾಗಿ ಎಲ್ಲರೂ ಖಂಡಿಸಿದ್ದಾರೆ. ವಿಧಾನಮಂಡಲದ ಅಧಿವೇಶನ ನಡೆಯುತ್ತಿದ್ದರೂ ಸಚಿವರು, ಇಲ್ಲಿಗೆ ಬಂದರು. ಪಂಚಪೀಠಗಳು, ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯದವರೂ ನಮ್ಮ ಜತೆ ನಿಂತರು. ನಾನು ಇವರಿಗೆಲ್ಲ ಹೇಗೆ ಕೃತಜ್ಞತೆ ಸಲ್ಲಿಸಬೇಕೋ ತಿಳಿಯುತ್ತಿಲ್ಲ ಎಂದು ಸ್ವಾಮೀಜಿಗಳು ಭಾವುಕರಾದರು. ಇದರಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಬೇಡಿಕೊಂಡರು.

ಜೈನ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಬೇಕೆಂದು ವಿನಂತಿಸಿದರಲ್ಲದೆ, ಉಪವಾಸ ಸತ್ಯಾಗ್ರಹ ಹಿಂಪಡೆಯುವುದಾಗಿ ಘೊಷಿಸಿದರು.

ಗೌಪ್ಯ ಮಾತುಕತೆ: ಶ್ರೀಗುಣಧರನಂದಿ ಸ್ವಾಮೀಜಿ ಹಾಗೂ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು 15 ನಿಮಿಷಕ್ಕೂ ಹೆಚ್ಚು ಸಮಯ ಗೌಪ್ಯವಾಗಿ ಮಾತುಕತೆ ನಡೆಸಿದರು. ಇದಕ್ಕೂ ಮೊದಲು ಕಾರ್ವಿುಕ ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ಕಾಂಗ್ರೆಸ್ ನಾಯಕರಾದ ಅನಿಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ ಇತರರು ಸ್ವಾಮೀಜಿಗಳನ್ನು ಭೇಟಿ ಮಾಡಿ ಸಾಂತ್ವನ ಮತ್ತು ಧೈರ್ಯದ ಮಾತುಗಳನ್ನಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net