ಶ್ರೀ ಕಾಮಕುಮಾರನಂದಿ ಮಹಾರಾಜರ ಹತ್ಯೆ ಪ್ರಕರಣ ಸಿಬಿಐಗೆ ವಹಿಸಿ

h9-Gunadharnandi Swamiji 2
Published on

ಹುಬ್ಬಳ್ಳಿ: ಚಿಕ್ಕೋಡಿಯ ಹಿರೇಕೋಡಿಯ ನಂದಿ ಪರ್ವತ ಆಶ್ರಮದ ಜೈನ್ ಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.

ತಾಲೂಕಿನ ವರೂರಿನ ಶ್ರೀ ನವಗ್ರಹತೀರ್ಥ ಕ್ಷೇತ್ರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಪತ್ತೆ ಪ್ರಕರಣ ದಾಖಲಾಗುತ್ತಿದ್ದಂತೆ ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕಿತ್ತು. ಕೊಲೆಯಾಗಿದೆ ಎಂದು ಗೊತ್ತಾದ ಬಳಿಕವೂ ಆರೋಪಿಗಳನ್ನು ಮುಚ್ಚಿಡುವ ಪ್ರಯತ್ನ ಮಾಡಿತು. ಯಾರೇ ಆರೋಪಿಗಳಿರಲಿ ಅವರನ್ನು ಶೀಘ್ರವೇ ಬಂಧಿಸಬೇಕಿತ್ತು. ಅದನ್ನು ಬಿಟ್ಟು ಇದರಲ್ಲೂ ತುಷ್ಟೀಕರಣ ಮಾಡಲಾಯಿತು ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಅಲ್ಲದೆ ಹಣ ಸೇರಿ ಇತರ ವ್ಯವಹಾರ ಎಂದು ಬಿಂಬಿಸಲಾಯಿತು ಎಂದು ದೂರಿದರು. ಈ ಪ್ರಕರಣವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಗಮನಕ್ಕೂ ತರಲಾಗುವುದು ಎಂದರು.

ಶ್ರೀ ನವಗ್ರಹ ತೀರ್ಥ ಕ್ಷೇತ್ರದ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಮಾತನಾಡಿ, ಜೈನರು ಅಲ್ಪಸಂಖ್ಯಾತರು. ಕಡಿಮೆ ಮತಗಳಿವೆ ಎಂಬ ಕಾರಣಕ್ಕೆ ನಮ್ಮ ಆಗ್ರಹವನ್ನು ಪರಿಗಣಿಸುತ್ತಿಲ್ಲ. ಜೈನ ಮುನಿಗಳ ಹತ್ಯೆ ನಂತರ ಎಲ್ಲ ಮುನಿಗಳಲ್ಲಿ ಆತಂಕ ಮೂಡಿದೆ. ಭದ್ರತೆ ಒದಗಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.

ಜೈನ ಸಾಧು, ಸಂತರು ಕಾಲ್ನಡಿಗೆಯಲ್ಲಿ ವಿಹಾರ ಮಾಡುವ ವೇಳೆ ರಾಜ್ಯದ ಯಾವುದೇ ಪ್ರದೇಶದಲ್ಲಿ ಅವರಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು. ಜೈನ ಸಾಧುಗಳ ವಿಹಾರ ವೇಳೆ ಅವರ ವಾಸ್ತವ್ಯಕ್ಕೆ ಶಾಲೆ, ಕಾಲೇಜ್ ಅಥವಾ ಸರ್ಕಾರಿ ಪ್ರವಾಸಿ ಮಂದಿರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಬೇಕು. ಜೈನ ತೀರ್ಥಗಳು, ಮಂದಿರಗಳ ಮೇಲೆ ನಡೆಯುವ ಅತಿಕ್ರಮಣ, ದಬ್ಬಾಳಿಕೆಗಳನ್ನು ತಡೆಯಬೇಕು ಎಂದು ಬೇಡಿಕೆ ಮಂಡಿಸಿದರು.

ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ: ಸದ್ಯ ಅಮರಣಾಂತ ಉಪವಾಸ ಸತ್ಯಾಗ್ರಹ ಕೈಬಿಟ್ಟಿದ್ದೇನೆ. ಯಾಕೆಂದರೆ ಧಾರವಾಡ ಜಿಲ್ಲಾಧಿಕಾರಿ, ಕೇಂದ್ರ ಸಚಿವರು ನನಗೆ ಮನವಿ ಮಾಡಿದ್ದಾರೆ. ಜು. 10ರಂದು ಸಂಜೆ 5ಗಂಟೆಯೊಳಗೆ ನನ್ನ ಬೇಡಿಕೆ ಈಡೇರಿಸುವ ಕುರಿತು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಖುದ್ದು ಇಲ್ಲಿಗೆ ಆಗಮಿಸಿ ವಾಗ್ದಾನ ನೀಡಬೇಕು. ಇಲ್ಲವಾದರೆ ಮತ್ತೆ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.

ಇದೇ ವೇಳೆ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಶ್ರೀ ಗುಣಧರ ನಂದಿ ಮಹಾರಾಜರು ಮನವಿ ಸಲ್ಲಿಸಿದರು.

ಮಾಜಿ ಎಂಎಲ್​ಸಿ ನಾಗರಾಜ ಛಬ್ಬಿ, ಪ್ರಮುಖರಾದ ಮಹೇಂದ್ರ ಸಿಂಘಿ, ವಿಮಲ ತಾಳಿಕೋಟಿ, ಸುಭಾಷ ಡಂಕ್, ಸಂತೋಷ ಪಾಟೀಲ, ರಾಜೇಂದ್ರ ಬೀಳಗಿ, ದೇವೇಂದ್ರ ಕಾಗೇನವರ, ರಮೇಶ ಬಾಫಣಾ ಇತರರು ಇದ್ದರು.

ಕೃಷಿ, ಋಷಿಗೆ ಬೇಕು ಸಂರಕ್ಷಣೆ: ಭಾರತವು ಕೃಷಿ ಮತ್ತು ಋಷಿಗೆ ಪ್ರಾಧಾನ್ಯತೆ ನೀಡಿದೆ. ಅವರ ಸಂರಕ್ಷಣೆಗೆ ಆದ್ಯತೆ ನೀಡಬೇಕಿದೆ ಎಂದು ಆಚಾರರ್ಯ ಶ್ರೀಗುಣಧರ ನಂದಿ ಮಹಾರಾಜರು, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಂದೆ ಅರುಹಿದರು.

ಜೈನ ಮುನಿಯನ್ನು ಅಮಾನುಷವಾಗಿ ಹತ್ಯೆ ಮಾಡಲಾಗುತ್ತಿದೆ ಎಂದರೆ ಭಯವಾಗುತ್ತದೆ. ಈಗಾಗಲೇ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಫೋನ್ ಮಾಡಿದ್ದರು. ಜು. 10ರಂದು ಬರುವುದಾಗಿ ಹೇಳಿದ್ದಾರೆ. ನೋಡೋಣ ಏನು ಹೇಳುತ್ತಾರೆ ಎಂದರು.

ಇದಕ್ಕೂ ಮೊದಲು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್​ಪಿ ಲೋಕೇಶ ಜಗಲಾಸರ ಕ್ಷೇತ್ರಕ್ಕೆ ಭೇಟಿ ನೀಡಿ, ಅಮರಣಾಂತ ಉಪವಾಸ ಕೈಬಿಡಲು ಶ್ರೀಗಳಿಗೆ ಮನವಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net