ಧರ್ಮಚಕ್ರ ಆರಾಧನೆ, ಸುವರ್ಣ ಮಹೋತ್ಸವ

jain sabhe
Published on

ಹೊಸದುರ್ಗ: ಪಟ್ಟಣದ ಭಗವಾನ್ ಪಾರ್ಶ್ವನಾಥ ಸ್ವಾಮಿ ಜಿನಮಂದಿರಕ್ಕೆ 50 ವರ್ಷ ಪೂರ್ಣಗೊಂಡಿದ್ದು, ಮೇ 20, 21 ಮತ್ತು 22ರಂದು ಧರ್ಮಚಕ್ರ ಆರಾಧನಾ ಹಾಗೂ ಸುವರ್ಣ ಮಹೋತ್ಸವ ಆಯೋಜಿಸಲಾಗಿದೆ ಎಂದು ಜೈನ ಸಮಾಜದ ಅಧ್ಯಕ್ಷ ಡಿ.ಆದಿರಾಜಯ್ಯ ತಿಳಿಸಿದರು.

ಪಟ್ಟಣದ ಪಾರ್ಶ್ವನಾಥ ಸ್ವಾಮಿ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಜೈನ ಸಮಾಜದ ಸಭೆಯಲ್ಲಿ ಮಾತನಾಡಿದರು.
ಹೊಸದುರ್ಗದಲ್ಲಿ 1969ರಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿ ತ್ರಿಕೂಟ ಚೂಡಾಮಣಿ ಜಿನಮಂದಿರ ನಿರ್ಮಾಣ ಮಾಡಿದ್ದರು. ಅಂದಿನ ಹೊಂಬುಜ ಜೈನಮಠದ ಶ್ರೀ ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಂಚಕಲ್ಯಾಣ ಪ್ರತಿಷ್ಠಾಪನೆ ಮಾಡಲಾಗಿತ್ತು. ಈಗ ದೇವಾಲಯಕ್ಕೆ 50 ವರ್ಷ ತುಂಬಿದೆ. ಜಿನಮಂದಿರ ನಿರ್ಮಾಣದ ನಂತರ ಜೈನ ಸಮುದಾಯ ಅಭಿವೃದ್ಧಿಯಾಗಿದೆ. ಹೀಗಾಗಿ ಜೈನ ಗುರುಗಳು, ವಿದ್ವಾಂಸರು ಹಾಗೂ ಸಾಧಕರ ಮಾರ್ಗದರ್ಶನದಲ್ಲಿ ಮಹೋತ್ಸವ ಆಯೋಜಿಸಲಾಗಿದೆ ಎಂದರು.

ಮೂರು ದಿನದ ಕಾರ್ಯಕ್ರಮದಲ್ಲಿ ಹೊಂಬುಜ ಮಠದ ಶ್ರೀ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಸೋಂದಾ ಮಠದ ಶ್ರೀ ಅಕಲಂಕಕೇಸರಿ ಭಟಾಕಲಂಕ ಭಟ್ಟಾರಕ ಸ್ವಾಮೀಜಿ, ಸಿಂಹಗದ್ದೆ ಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ, ಸುರೇಂದ್ರಕುಮಾರ್, ಅನಿತಾ ಸುರೇಂದ್ರಕುಮಾರ್, ಪತ್ರಕರ್ತ ಅಜಿತ್ ಹನುಮಕ್ಕನವರ್, ನೂತನ ಶಾಸಕರಾದ ಬಿ.ಜಿ.ಗೋವಿಂದಪ್ಪ, ಡಿ.ಸುಧಾಕರ್, ಮಾಜಿ ಶಾಸಕ ಇಲ್ಕಲ್ ವಿಜಯಕುಮಾರ್ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಸಾಹಿತಿ ಸುಮತಿ ಕುಮಾರ್ ಮಾತನಾಡಿದರು. ಜೈನ ಸಮಾಜದ ಮುಖಂಡರಾದ ಇ.ವಿ.ಅಜ್ಜಪ್ಪ, ಇ.ವಿ.ಅಶೋಕ, ಮಾಜಿ ಪುರಸಭಾ ಸದಸ್ಯ ಬ್ರಹ್ಮಪಾಲ್, ಇಂದ್ರಕುಮಾರ್, ಸುರೇಶ್ ಜೈನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net