ಜೈನ ಸಮುದಾಯದಿಂದ ಸುವರ್ಣಸೌಧ ಮುತ್ತಿಗೆಗೆ ನಿರ್ಧಾರ

h23-gunadharanandi maharaj
Published on

ಹುಬ್ಬಳ್ಳಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ವೇಳೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಲಾಗಿದೆ ಎಂದು ವರೂರು ನವಗ್ರಹ ತೀರ್ಥಕ್ಷೇತ್ರದ ಶ್ರೀ ಗುಣಧರನಂದಿ ಮಹಾರಾಜರು ಹೇಳಿದರು.

ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರೂರಿನಿಂದ ನಾನು ನ. 25ರಿಂದ ಪಾದಯಾತ್ರೆ ಹೊರಟು ಬಸ್ತವಾಡ ಗ್ರಾಮ ತಲುಪುತ್ತೇನೆ. ಡಿ. 9ರಂದು ಬೆಳಗಾವಿಯ ಬಸ್ತವಾಡ ಗ್ರಾಮದಿಂದ 30 ಸಾವಿರದಷ್ಟು ಜೈನ ಸಮುದಾಯದ ಜನರು ತೆರಳಿ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲಿದ್ದಾರೆ. ಆಗಲೂ ಬೇಡಿಕೆ ಈಡೇರದಿದ್ದರೆ ತೀವ್ರ ತೆರನಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸರ್ಕಾರ ಎಲ್ಲ ಸಮಾಜಕ್ಕೂ ನಿಗಮ ಮಂಡಳಿ ನೀಡಿದೆ. ಆದರೆ, ಅತಿ ಚಿಕ್ಕ ಜೈನ ಸಮುದಾಯಕ್ಕೆ ಇನ್ನೂ ನಿಗಮ ಮಂಡಳಿ ನೀಡಿಲ್ಲ. ಗೃಹಸಚಿವ ಡಾ. ಜಿ. ಪರಮೇಶ್ವರ ಅವರು ಆಶ್ವಾಸನೆ ನೀಡಿ ಒಂದೂವರೆ ವರ್ಷ ಆಯ್ತು. ಈ ಕುರಿತು ಪ್ರಶ್ನಿಸಿದರೆ ವಿಧಾನಸೌಧದಲ್ಲಿ ಕಡತ ಪರಿಶೀಲನೆಯ ಪ್ರಕ್ರಿಯೆಯಲ್ಲಿದೆ ಎನ್ನುತ್ತಿದ್ದಾರೆ. ಈ ಅವಧಿಯಲ್ಲಿ ಮೂರು-ನಾಲ್ಕು ಸಮಾಜಕ್ಕೆ ನಿಗಮ ಮಂಡಳಿ ಸ್ಥಾನಮಾನ ನೀಡಲಾಗಿದೆ. ನಮಗೆ ನೀಡಲು ಸಮಸ್ಯೆ ಏಕೆ? ಎಂದು ಪ್ರಶ್ನಿಸಿದರು.

ವರೂರು ಕ್ಷೇತ್ರದಲ್ಲಿ ಜನವರಿಯಲ್ಲಿ ಮಹಾಮಸ್ತಾಕಾಭಿಷೇಕ ನಡೆಯಲಿದೆ. ತಮಿಳನಾಡು, ಕೇರಳ, ಗುಜರಾತ ಸೇರಿ ವಿವಿಧ ರಾಜ್ಯಗಳಿಂದ ಅಸಂಖ್ಯಾತ ಭಕ್ತರು ಬರುತ್ತಾರೆ. ಚಳಿಗಾಲದ ಸಮಯವಾಗಿರುವುದರಿಂದ ರಾತ್ರಿ ವೇಳೆ ವಿಶ್ರಾಂತಿ ಪಡೆಯಲು ಸರ್ಕಾರಿ ಕಟ್ಟಡಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಜೈನ ಸಮಾಜವು ಸಾಕ್ಷರತೆ ಹೊಂದಿದ್ದರೂ ಸಾಕಷ್ಟು ಕುಟುಂಬ ಬಡತನದಲ್ಲಿವೆ. ಅಂಥವರನ್ನು ಗುರುತಿಸಿ ಸರ್ಕಾರ ನಿವೇಶನ ನೀಡಿದರೆ, ಮನೆ ಕಟ್ಟಿಸಿಕೊಳ್ಳಲು ನಾವು ಸಹಾಯ ಮಾಡುತ್ತೇವೆ. ಅಲ್ಲದೆ, ಸಮಾಜದ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆ ಮಾಡಬೇಕು. ಚಳಿಗಾಲ ಅಧಿವೇಶನದೊಳಗಾಗಿ ನಮ್ಮ ಎಲ್ಲ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಪ್ರತಿಭಟನೆ ತೀವ್ರ ಗೊಳಿಸಲಾಗುವುದು ಎಂದರು.

ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ವಿತರಣೆ ಕಡ್ಡಾಯವೆಂದು ಸರ್ಕಾರದ ಆದೇಶದ ಹೊರಡಿಸಿದೆ. ರಾಜ್ಯದಲ್ಲಿನ ಬಹುತೇಕ ಮಠಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಧಾರ್ಮಿಕ ಪರಂಪರೆ, ಅಹಿಂಸಾ ಧರ್ಮ ಪಾಲಿಸುತ್ತ ಮಾಂಸ ಸೇವನೆಯಿಂದ ದೂರ ಇದ್ದಾರೆ. ಆದರೆ, ಸರ್ಕಾರದ ಆದೇಶ ಅವರ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದೆ. ಮಠಗಳಲ್ಲಿ ಓದುವ ಮಕ್ಕಳಿಗೆ ಮೊಟ್ಟೆ ತಿನ್ನುವ ಆದೇಶದಿಂದ ವಿನಾಯಿತಿ ನೀಡಿ, ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಶೇ. 50ರಷ್ಟು ಮೀಸಲಾತಿ ನಿಗದಿಪಡಿಸಿರುವ ವಿವಿಧ ಕಾಲೇಜ್ ಸೀಟ್‌ಗಳು ಭರ್ತಿಯಾಗದಿದ್ದರೆ ಅವುಗಳನ್ನು ಬೇರೆ ಸಮುದಾಯಕ್ಕೆ ಕೊಡಬೇಕು ಎಂದು ಒತ್ತಾಯಿಸಿದರು.

ಅಲ್ಪಸಂಖ್ಯಾತರ ಆಯೋಗಕ್ಕೆ ಒಂದೇ ಸಮಾಜದವರನ್ನು ಅಧ್ಯಕ್ಷರನ್ನಾಗಿ ಮಾಡುತ್ತ ಬರಲಾಗಿದೆ. ಜೈನ, ಬೌದ್ಧ, ಕ್ರಿಶ್ಚಿಯನ್, ಸಿಕ್ ಸಮುದಾಯದವರು ಸಹ ಇದೇ ನಿಗಮ ಮಂಡಳಿಗೆ ಒಳಪಡುತ್ತಾರೆ. ಎಲ್ಲ ಸಮುದಾಯದವರಿಗೂ ಅಧ್ಯಕ್ಷ ಸ್ಥಾನ ನೀಡಬೇಕು. ಎರಡು, ಮೂರು ವರ್ಷಕ್ಕೊಮ್ಮೆ ಅಧ್ಯಕ್ಷರನ್ನು ಬದಲಾಯಿಸಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಶ್ರೀ ಗುಣಧರನಂದಿ ಮಹಾರಾಜರು ಹೇಳಿದರು.

ಸಮಾಜ ಮುಖಂಡರಾದ ಸಂದೀಪ ಸೈಬಣ್ಣವರ, ದೇವೇಂದ್ರಪ್ಪ ಕಾಗೇನವರ, ರಾಜೇಂದ್ರ ಬಿಳಗಿ, ಸಂತೋಷ ಮುರಗಿಪಾಟೀಲ, ವಿಮಲ ತಾಳಿಕೋಟೆ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net