ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಿಂದ ಜೈಲರ್ ಮೇಲೆ ಹಲ್ಲೆ

FIR-2
Published on

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ರಾಜಾ ಅಲಿಯಾಸ್ ಜಪಾನ್ ಮಂಗ ಎಂಬಾತ ಕರ್ತವ್ಯ ನಿರತ ಜೈಲರ್‌ಗೆ ಅವಾಚ್ಯ ಶಬ್ಧಗಳಿಂದ ಬೈದು ಅವರ ಮೇಲೆ ಹಲ್ಲೆ ಮಾಡಿದ್ದಾನೆ.

ಜೈಲರ್ ವಿಜಯ್ ಕುಮಾರ್ ಸಂಕಾ ಅವರು ಜೈಲಿನ ‘ಎ ಬ್ಲಾಕ್’ನ ಕೊಠಡಿ ಸಂಖ್ಯೆ 3ರಲ್ಲಿ ಬೀಗ ಮುದ್ರೆ ಮಾಡುವ ಸಂದರ್ಭ ಕೈದಿ ರಾಜಾ, ಲೈಟರ್ ನೀಡುವಂತೆ ಒತ್ತಾಯ ಮಾಡಿದ್ದಾನೆ. ಅದಕ್ಕೆ ವಿಜಯ್ ಅವರು ನನ್ನ ಬಳಿ ಲೈಟರ್ ಸಿಗುವುದಿಲ್ಲ ಎಂದು ಹೇಳಿದಾಗ ಏರುಧ್ವನಿಯಲ್ಲಿ ಅವಾಚ್ಯ ಶಬ್ಧಗಳಿಂದ ಬೈದು, ‘ಇಲ್ಲ ಅಂದರೆ ಅಧೀಕ್ಷಕರಿಗೆ ಹೇಳು ರಾಜಾನಿಗೆ ಲೈಟರ್ ಬೇಕಂತೆ’ ಎಂದಿದ್ದಾನೆ. ಅದಕ್ಕೆ ಜೈಲರ್ ಸರಿಯಾಗಿ ಮಾತನಾಡು ಅವಾಚ್ಯ ಶಬ್ಧ ಬೇಡ ಎಂದು ಹೇಳಿದ್ದಾರೆ. ಆಗ ಮತ್ತಷ್ಟು ನಿಂದಿಸುತ್ತಾ ಕೊಠಡಿಯ ಒಳಗಡೆಯಿಂದಲೇ ವಿಜಯ್ ಅವರ ಬಲಕೈಯನ್ನು ಎಳೆದು ಪರಚಿ ತಿರುಗಿಸಿದ್ದಾನೆ. ಇದರಿಂದ ಅವರ ಬಲಕೈಗೆ ತೀವ್ರ ಪೆಟ್ಟಾಗಿದೆ. ಅನಂತರ ಅವರನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜ.13ರಂದು ಕೂಡಾ ಉಪ ಕಾರಾಗೃಹದ ‘ಎ’ ಬ್ಲಾಕ್‌ನಲ್ಲಿ ನಿಷೇಧಿತ ವಸ್ತುಗಳಿರುವ ಶಂಕೆಯ ಹಿನ್ನೆಲೆಯಲ್ಲಿ ಸಿಬ್ಬಂದಿ ತಪಾಸಣೆಗೆ ಮುಂದಾದ ವೇಳೆ ವಿಚಾರಣಾಧೀನ ಕೈದಿಗಳು ಬೆದರಿಕೆಯೊಡ್ಡಿ, ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು.

ಮೊಬೈಲ್, ಗಾಂಜಾ ಮೊದಲಾದ ನಿಷೇಧಿತ ವಸ್ತುಗಳಿರುವುದು ಜೈಲು ಸಿಬ್ಬಂದಿಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತಪಾಸಣೆಗೆ ಮುಂದಾಗಿದ್ದರು. ಈ ಸಂದರ್ಭ ಕೈದಿಗಳು ಅಲ್ಲಿದ್ದ ಪಾತ್ರೆ ಹಾಗೂ ಇತರ ಸೊತ್ತುಗಳಿಂದ ದಾಳಿ ನಡೆಸಲು ಮುಂದಾಗಿ, ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಒಡ್ಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net