ಪಾಕಿಸ್ತಾನಕ್ಕೆ ಜೈ ಎಂದವರಿಗೆ ಜೈಲು

court feb 17 2020
Published on

ಹುಬ್ಬಳ್ಳಿ: ಪಾಕಿಸ್ತಾನ ಜಿಂದಾಬಾದ್ ಎಂದು ಘೊಷಣೆ ಕೂಗಿದ್ದಲ್ಲದೆ, ಬಂಧನದಿಂದ ಒಂದೇ ದಿನದಲ್ಲಿ ಬಿಡುಗಡೆಗೊಂಡಿದ್ದ ಕಾಶ್ಮೀರ ಮೂಲದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಪುನಃ ಬಂಧಿಸಿದ್ದಾರೆ. ಆ ಮೂಲಕ ಹಿಂದುಪರ ಸಂಘಟನೆಗಳ ಪ್ರತಿಭಟನೆಗೆ ಗೆಲುವು ಸಿಕ್ಕಂತಾಗಿದೆ. ಆರೋಪಿಗಳನ್ನು ಬಂಧಿಸಿ, ಬಿಡುಗಡೆ ಮಾಡಿದ್ದಕ್ಕಾಗಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದ ಹುಬ್ಬಳ್ಳಿ- ಧಾರವಾಡ ಕಮಿಷನರೇಟ್ ಪೊಲೀಸರು ಪುನಃ ಆರೋಪಿಗಳನ್ನು ಬಂಧಿಸಿ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಕಾಶ್ಮೀರದ ಬಾರಾಮುಲ್ಲಾದ ಬಾಸಿತ್ ಸೋಫಿ, ಅನಂತನಾಗ್ ಜಿಲ್ಲೆಯ ತಾಲೀಬ ಮಜೀದ್ ಹಾಗೂ ಅಮೀರ್ ಮೊಯಿನುದ್ದೀನ್ ವಾನಿ ಬಂಧಿತರು. ಇವರ ವಿರುದ್ಧ ಗೋಕುಲ ರೋಡ್ ಠಾಣೆಯಲ್ಲಿ ಐಪಿಸಿ ಕಾಯ್ದೆ 153 ಎ ಮತ್ತು ಬಿ, 124 ಎ ಹಾಗೂ 505 ಅಡಿ ಪ್ರಕರಣ ದಾಖಲಿಸಲಾಗಿದೆ.

ಹಲ್ಲೆ ಯತ್ನ...

ಆರೋಪಿಗಳನ್ನು ಕಾರಾಗೃಹಕ್ಕೆ ಕರೆದೊಯ್ಯುವ ವೇಳೆ ಕೋರ್ಟ್ ಆವರಣದಲ್ಲೇ ಹಿಂದುಪರ ಸಂಘಟ ನೆಗಳ ಕಾರ್ಯಕರ್ತರು ಹಾಗೂ ಕೆಲ ವಕೀಲರು ಹಲ್ಲೆಗೆ ಮುಂದಾದರು. ಪೊಲೀಸ್ ಭದ್ರತೆ ಭೇದಿಸಿ ಆರೋಪಿಗಳನ್ನು ಕರೆದೊಯ್ಯುವ ವಾಹನದ ಮೇಲೆ ಚಪ್ಪಲಿ- ಬೂಟು ಎಸೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಆರೋಪಿಗಳನ್ನು ವಿಶ್ವೇಶ್ವರ ನಗರದ ಉಪ ಕಾರಾಗೃಹಕ್ಕೆ ಕರೆದೊಯ್ದರು. ಮುಂಜಾಗ್ರತೆ ಕ್ರಮವಾಗಿ ಉಪ ಕಾರಾಗೃಹ ಅಧಿಕಾರಿಗಳು ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಆರೋಪಿಗಳು ನ್ಯಾಯಾಲಯ ಪ್ರವೇಶಿಸುತ್ತಿದ್ದಂತೆ ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ವಕೀಲರು ‘ಭಾರತ್ ಮಾತಾ ಕಿ ಜೈ’ ಎಂದು ಘೊಷಣೆ ಕೂಗಿದರು. ವಿಚಾರಣೆ ನಡೆಸಿದ 3ನೇ ಜೆಎಂಎಫ್​ಸಿ ನ್ಯಾಯಾಲಯದ ನ್ಯಾಯಾಧೀಶರಾದ ಪುಷ್ಪಾವತಿ ಜೋಗೋಜಿ ಅವರು ಆರೋಪಿಗಳನ್ನು ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶಿಸಿದರು. ಆರೋಪಿಗಳ ಪರ ವಕಾಲತಿಗೆ ವಕೀಲರು ಹಿಂದೇಟು ಹಾಕಿದರು.

ಎಬಿವಿಪಿ ಪ್ರತಿಭಟನೆ: ದೇಶದ್ರೋಹಿ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ನ್ಯಾಯಾಲಯದ ಎದುರು ದಿಢೀರ್ ಪ್ರತಿಭಟನೆ ನಡೆಸಿದರು. ಅನುಮತಿ ಇಲ್ಲದೆ ಪ್ರತಿಭಟನೆ ನಡೆಸುವುದಕ್ಕೆ ಪೊಲೀಸರು ಆಕ್ಷೇಪಿಸಿದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು. ನಂತರ ಮುಖ್ಯದ್ವಾರದ ಬಳಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು, ದೇಶದ್ರೋಹಿಗಳ ವಿರುದ್ಧ ಘೊಷಣೆ ಕೂಗಿ, ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು.

ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರತೀಕ ಮಾಳಿ, ನಗರ ಕಾರ್ಯದರ್ಶಿ ಅರುಣ ಶಾಮನೂರ, ವಿನಾಯಕಗೌಡ, ಗಂಗಾಧರ ಹಂಜಗಿ, ಅರುಣಕುಮಾರ, ಸುಭಾಷ, ಕಾವ್ಯಾ ಜೋಶಿ, ವೀಣಾ ಪಾಟೀಲ, ನಿಶಾ ಕಾಮ್ಟೆ, ಮತ್ತಿತರರು ಪಾಲ್ಗೊಂಡಿದ್ದರು.

ಎನ್​ಎಸ್​ಯುುಐ ಆಕ್ರೋಶ

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್​ಎಸ್​ಯುುಐ) ಸದಸ್ಯರು ವಿದ್ಯಾನಗರದ ಕಿಮ್ಸ್​ ಮುಖ್ಯದ್ವಾರದ ಬಳಿ ಪ್ರತಿಭಟನೆ ನಡೆಸಿ ದೇಶದ್ರೋಹಿ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದರು. ಪ್ರಕಾಶ ಬೆಂಡಿಗೇರಿ ಮತ್ತಿತರರು ಇದ್ದರು.

ಕಮಿಷನರ್ ವಜಾಕ್ಕೆ ಆಗ್ರಹ

ದೇಶದ್ರೋಹದಂಥ ಗಂಭೀರ ಪ್ರಕರಣದ ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸದೇ ಬಿಡುಗಡೆ ಮಾಡಿದ ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಿ ಇಲಾಖಾ ತನಿಖೆಗೆ ಒಳಪಡಿಸಬೇಕು ಎಂದು ಯುವ ವಕೀಲರ ಸಂಘದ ಅಧ್ಯಕ್ಷ ಅಶೋಕ ಅಣವೇಕರ ಆಗ್ರಹಿಸಿದ್ದಾರೆ. ಆರೋಪಿಗಳ ವಿರುದ್ಧ ವಿಡಿಯೋ ಮತ್ತಿತರ ಸಾಕ್ಷಿಗಳು ಇದ್ದರೂ ಸಿಆರ್​ಪಿಸಿ 169 ಬಾಂಡ್ ಮೇಲೆ ಠಾಣೆಯಲ್ಲೇ ಬಿಡುಗಡೆ ಮಾಡಿರುವುದು ಖಂಡನೀಯ. ಇದು ಅಧಿಕಾರದ ದುರುಪಯೋಗವಾಗಿದೆ. ಇವರು ಅಧಿಕಾರದಲ್ಲಿ ಮುಂದುವರಿದರೆ ಚಾರ್ಜ್​ಶೀಟ್ ಸಲ್ಲಿಸುವ ವೇಳೆ ಪಕ್ಷಪಾತ ಮಾಡಿದರೆ ದೇಶದ್ರೋಹಿಗಳು ಆರೋಪದಿಂದ ಖುಲಾಸೆಯಾಗುವ ಸಾಧ್ಯತೆ ಇದೆ. ಹಾಗಾಗಿ, ಅಮಾನತು ಮಾಡಬೇಕು ಎಂದು ಮುಖ್ಯಮಂತ್ರಿಯವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಪಾಕಿಸ್ತಾನದ ಪರ ಘೊಷಣೆ ಕೂಗಿದ ವಿದ್ಯಾರ್ಥಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ. ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ. ಪೊಲೀಸ್ ಆಯುಕ್ತರು ವಿದ್ಯಾರ್ಥಿಗಳನ್ನು ಬಾಂಡ್ ಮೇಲೆ ಬಿಡುಗಡೆ ಮಾಡಿದ್ದ ಬಗ್ಗೆ ವರದಿ ಕೇಳಿದ್ದೇನೆ. | ಬಸವರಾಜ ಬೊಮ್ಮಾಯಿ ಗೃಹ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net