

ಮಂಡ್ಯ: ಅಪ್ರಾಪ್ತೆ ಮೇಲೆ ತೀವ್ರತರ ಲೈಂಗಿಕ ದೌರ್ಜನ್ಯ ನಡೆಸಿದ್ದ ಅಪರಾಧಿಗೆ ಎಫ್ ಟಿಎಸ್‌ಸಿ-1(ಪೋಕ್ಸೋ ವಿಶೇಷ) ನ್ಯಾಯಾಲಯ ಎಂಟು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದೆ.
ಕೆ.ಆರ್.ಪೇಟೆ ತಾಲೂಕಿನ ರಾಮಕೃಷ್ಣ(34)ಶಿಕ್ಷೆಗೆ ಗುರಿಯಾದ ಅಪರಾಧಿ. ಈತ 2024ರಲ್ಲಿ ಆರು ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿ ತೀವ್ರತರನಾದ ಲೈಂಗಿಕ ಹಲ್ಲೆ ಎಸಗಿದ್ದನು. ಈತನ ವಿರುದ್ಧ ಕಲಂ-363, 354 ಐ.ಪಿ.ಸಿ ಮತ್ತು ಕಲಂ-10 ಪೋಕ್ಸೋ ಕಾಯ್ದೆಯಡಿ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪಿಐಎಸ್ ಸಿದ್ದಲಿಂಗ ಬಾನಸಿ ತನಿಖೆ ನಡೆಸಿದ್ದು, ಪಿಐ ರೇವತಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ದಾಖಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶೆ ಮಂಜುಳಾ ಇಟ್ಟಿ ಅವರು ಅಪರಾಧಿಗೆ ಕಲಂ-363, 354(ಎ) ಐ.ಪಿ.ಸಿ ಹಾಗೂ ಕಲಂ-10 ಪೋಕ್ಸೋ ಕಾಯ್ದೆಯಡಿ ಅಪರಾಧಿ ಎಂದು ತೀರ್ಪು ನೀಡಿದ್ದಾರೆ. ಕಲಂ-363 ಐ.ಪಿ.ಸಿ.ಗೆ ಮೂರು ವರ್ಷ ಸಾದಾ ಸಜೆ ಮತ್ತು 1000 ರೂ ದಂಡ ಹಾಗೂ ಕಲಂ-354(ಎ) ಐ.ಪಿ.ಸಿ. ಕಲಂ-10 ರ ಪೋಕ್ಸೋ ಕಾಯಿದೆ ಅಪರಾಧಕ್ಕೆ ಐದು ವರ್ಷ ಕಠಿಣ ಸಜೆ ಮತ್ತು 5,000 ರೂ ದಂಡ ವಿಧಿಸಿದ್ದಾರೆ. ನೊಂದ ಬಾಲಕಿಗೆ 50,000 ರೂ ಪರಿಹಾರ ಪಾವತಿಸುವಂತೆ ಆದೇಶ ಮಾಡಿದ್ದಾರೆ. ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕಿ ಎಂ.ಜೆ ಪೂರ್ಣಿಮಾ ವಾದ ಮಂಡಿಸಿದ್ದರು.