ಜೈಲುಗಳು ಮನಃ ಪರಿವರ್ತನೆ ಕೇಂದ್ರಗಳು

dj clk hppc
Published on

ಚಳ್ಳಕೆರೆ: ಜೈಲುಗಳು ಕೈದಿಗಳಿಗೆ ಹಿಂಸೆ ನೀಡುವ ಕೇಂದ್ರಗಳಲ್ಲ. ಬದಲಿಗೆ ಮನಃ ಪರಿವರ್ತನೆಗೆ ಅವಕಾಶ ಕಲ್ಪಿಸುವ ಸ್ಥಳ ಎಂದು ಕಾರಾಗೃಹದ ಅಧಿಕಾರಿ ಶ್ರೀಮಂತಗೌಡ ಪಾಟೀಲ್ ಹೇಳಿದರು.

ಚಳ್ಳಕೆರೆ ಎಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಸ್ನಾತಕೋತ್ತರ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ವಿದ್ಯಾರ್ಥಿಗಳು ಗುರುವಾರ ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ಭೇಟಿ ನೀಡಿದ್ದ ವೇಳೆ ಮಾಹಿತಿ ನೀಡಿ ಮಾತನಾಡಿದರು.

ಹೊರಗಡೆ ತಪ್ಪು ಮಾಡಿದವರಿಗೆ ಕಾರಾಗೃಹದಲ್ಲಿ ಹಿಂಸೆ ಮಾಡುವುದಿಲ್ಲ. ಮಾನಸಿಕವಾಗಿ ಮತ್ತು ನಡವಳಿಕೆಯಲ್ಲಿ ಬದಲಾಗುವಂತೆ ಪ್ರೇರೇಪಿಸಲಾಗುವುದು.

ಆಕಸ್ಮಿಕ ಅಥವಾ ಉದ್ದೇಶಪೂರ್ವಕವಾಗಿ ಕಾನೂನಿನ ಅರಿವು ಇಲ್ಲದೆ, ಸಿಟ್ಟು, ಕೋಪ, ದ್ವೇಷ ಹೀಗೆ ವಿವಿಧ ಕಾರಣಕ್ಕೆ ತಪ್ಪು ಮಾಡಿದವರು ಜೈಲಿನಲ್ಲಿ ಬದಲಾಗಲು ಬಹಳಷ್ಟ ಅವಕಾಶ ಕಲ್ಪಿಸಲಾಗುತ್ತದೆ ಎಂದರು.

ಗ್ರಂಥಾಲಯದ ವ್ಯವಸ್ಥೆ ಇದೆ. 11 ಸಾವಿರ ಪುಸ್ತಕಗಳಿವೆ. ವಿಚಾರವಂತಿಕೆಯಲ್ಲಿ ಬದಲಾವಣೆ ಕಂಡುಕೊಳ್ಳಲು ಸಾಕಷ್ಟು ಕಾಲಾವಕಾಶ ಇರುತ್ತದೆ.

ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎನ್ನುವುದೇ ನಿರ್ವಹಣೆಯ ಧ್ಯೇಯ ಆಗಿರುತ್ತದೆ ಎಂದ ಅವರು, ಪೋಕ್ಸೋ ಮತ್ತು ಸಾಧಾರಣಾ ಪ್ರಕರಣಗಳ ಅನುಸಾರವಾಗಿ ಅಪರಾಧಿಗಳಿಗೆ ಪರ್ಯಾಯ ವ್ಯವಸ್ಥೆ ಇರುತ್ತವೆ ಎಂದು ಮಾಹಿತಿ ನೀಡಿದರು.

ಪ್ರಾಧ್ಯಾಪಕರಾದ ಡಾ.ಕೆ.ಸಿ.ಶರಣಪ್ಪ, ಡಾ.ಕೆ.ಎಂ.ದೇವಪ್ಪ, ಪಿ.ನಾಗರಾಜ, ಡಾ.ಚಿತ್ತಯ್ಯ, ವಿದ್ಯಾರ್ಥಿಗಳಾದ ಎಲ್. ಕರಿಬಸವೇಶ್ವರ, ರಾಕೇಶ್, ವಿಜಯಕುಮಾರ್, ತ್ರಿವೇಣಿ, ಶೋಭಾ, ಪೂಜಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net