ಕಾರಾಗೃಹ ಸಿಬ್ಬಂದಿಗೆ ವರ್ಗಾವಣೆ ಸಂಕಷ್ಟ

mangalore jail
Published on

 ಹರೀಶ್ ಮೋಟುಕಾನ ಮಂಗಳೂರು

ಸರ್ಕಾರ ವರ್ಗಾವಣೆ ಮಾರ್ಗಸೂಚಿಯಲ್ಲಿ 2020-21ನೇ ಸಾಲಿನಲ್ಲಿ ಗ್ರೂಪ್ ‘ಬಿ’ ಮತ್ತು ಗ್ರೂಪ್ ‘ಸಿ’ ವರ್ಗದ ಅಧಿಕಾರಿ, ನೌಕರರಿಗೆ ಮಾತ್ರ ಅನ್ವಯವಾಗುವಂತೆ ಶೇ.6ರಷ್ಟು ಸಾರ್ವತ್ರಿಕ ವರ್ಗಾವಣೆ ಮಾಡಬಹುದು ಎಂದಿದ್ದರೂ, ಕಾರಾಗೃಹ ಇಲಾಖೆಯಲ್ಲಿ ಇದು ಶೇ.2ರಷ್ಟೂ ಜಾರಿಯಾಗಿಲ್ಲ.

ಕೋವಿಡ್-19 ಹಿನ್ನೆಲೆಯಲ್ಲಿ ಈ ಬಾರಿ ಎಲ್ಲ ಇಲಾಖೆಗಳಲ್ಲಿ ಸಾರ್ವತ್ರಿಕ ವರ್ಗಾವಣೆಯನ್ನು ಮಿತಿಗೊಳಿಸಿ ಒಂದು ಜೇಷ್ಠತಾ ಘಟಕದಲ್ಲಿ ಕಾರ್ಯನಿರತ ವೃಂದ ಬಲದ ಶೇ.6ರನ್ನು ಮೀರದಂತೆ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖೆ ಸಚಿವರಿಗೆ ಅಧಿಕಾರ ನೀಡಲಾಗಿತ್ತು. ದಂಪತಿ, ವೈದ್ಯಕೀಯ ಕಾರಣಕ್ಕಾಗಿ ಊರಿಗೆ ವರ್ಗಾವಣೆ ಮಾಡುವಂತೆ ಹಲವು ಮಂದಿ ಇಲಾಖೆಗೆ ಮನವಿ ಮಾಡಿದ್ದರು. ಇದರ ಅವಧಿ ಕಳೆದು ಎರಡು ತಿಂಗಳಾದರೂ ವರ್ಗಾವಣೆ ಪ್ರಕ್ರಿಯೆ ನಡೆಸಿಲ್ಲ ಎಂದು ವರ್ಗಾವಣೆ ಬಯಸಿರುವ ಅಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಈ ನಡುವೆ ಶೇ.2ರಷ್ಟು ಮಂದಿ ಮುಖ್ಯಮಂತ್ರಿ, ಗೃಹಸಚಿವರನ್ನು ಭೇಟಿಯಾಗಿ ಪ್ರಭಾವ ಬಳಸಿ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ವರ್ಗಾವಣೆಗೆ ಅರ್ಜಿ ಸಲ್ಲಿಸಿದ ಉಳಿದವರು ಆದೇಶಕ್ಕಾಗಿ ಎದುರು ನೋಡುತ್ತಲೇ ಇದ್ದಾರೆ. ಗೃಹ ಸಚಿವರು ತಕ್ಷಣ ಈ ಬಗ್ಗೆ ಗಮನ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಿಗಲಿಲ್ಲ ಮುಂಬಡ್ತಿ-ಸಮವಸ್ತ್ರ!

ಕಾರಾಗೃಹ ಇಲಾಖೆಯಲ್ಲಿ ಅರ್ಹರಿಗೆ ಮುಂಬಡ್ತಿಯೂ ಆಗಿಲ್ಲ. ಎರಡು ವರ್ಷಗಳಿಂದ ಸಮವಸ್ತ್ರವೂ ಸಿಕ್ಕಿಲ್ಲ. ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್‌ನಿಂದ ಎಎಸ್‌ಐ ತನಕದ ಹುದ್ದೆಗಳಿಗೆ ಐಜಿಪಿ ರ‌್ಯಾಂಕ್ ಅಧಿಕಾರಿಗಳು ಆಯಾ ವಲಯಗಳಲ್ಲಿ ಮುಂಬಡ್ತಿ ನೀಡುವ ಅಧಿಕಾರ ಹೊಂದಿದ್ದಾರೆ. ಆದರೆ, ಕಾರಾಗೃಹ ಇಲಾಖೆಯಲ್ಲಿ ಸರ್ಕಾರದ ಮಟ್ಟದಲ್ಲೇ ಈ ಪ್ರಕ್ರಿಯೆ ನಡೆಯುತ್ತದೆ. ಈ ಬಾರಿ ಪೊಲೀಸ್ ಇಲಾಖೆಯಲ್ಲಿ ಮುಂಬಡ್ತಿ ಪ್ರಕ್ರಿಯೆ ನಡೆದಿದ್ದು, ಕಾರಾಗೃಹ ಇಲಾಖೆಯಲ್ಲಿ ಇನ್ನೂ ಆರಂಭಗೊಂಡಿಲ್ಲ. ಹಲವು ಕಾರಾಗೃಹಗಳಲ್ಲಿ ಹುದ್ದೆಗಳು ಖಾಲಿ ಉಳಿದಿವೆ. ವರ್ಷಂಪ್ರತಿ ಕಾರಾಗೃಹ ಅಧಿಕಾರಿಗಳಿಗೆ ಸಿಗುತ್ತಿದ್ದ ಖಾಕಿ ಸಮವಸ್ತ್ರ ಪೂರೈಕೆ ಆಗದೆ ಎರಡು ವರ್ಷಗಳು ಕಳೆದಿವೆ.

ಕಾರಾಗೃಹ ಸಿಬ್ಬಂದಿಗೆ ದೀಪಾವಳಿ, ಕ್ರಿಸ್‌ಮಸ್, ರಂಜಾನ್ ಮೊದಲಾದ ಹಬ್ಬಗಳಿಗೆ ರಜೆ ಇಲ್ಲ. ರಜೆ ಮಾಡಬೇಕಾದ ಅನಿವಾರ್ಯತೆ ಎದುರಾದರೆ ಸಿ.ಎಲ್.ಹಾಕಬೇಕಾಗುತ್ತದೆ. ವಿಶೇಷ ದಿನಗಳಂದು ಕೆಲಸ ಮಾಡಿದವರಿಗೆ ವಾರ್ಷಿಕ ಒಂದು ತಿಂಗಳ ವೇತನ ಹೆಚ್ಚುವರಿ ನೀಡುವ ವ್ಯವಸ್ಥೆ ಇದೆ. ಆದರೆ ಕಳೆದ ವರ್ಷದ ಈ ವೇತನವೂ ಇನ್ನೂ ಬಿಡುಗಡೆ ಆಗಿಲ್ಲ ಎಂದು ಸಿಬ್ಬಂದಿ ತಿಳಿಸಿದ್ದಾರೆ.

ಕೋವಿಡ್-19 ಹಿನ್ನೆಲೆಯಲ್ಲಿ ಸಾರ್ವತ್ರಿಕ ವರ್ಗಾವಣೆ ತಡೆ ಹಿಡಿಯಲಾಗಿದೆ. ತುರ್ತು ಅವಶ್ಯ ಇದ್ದ ನೌಕರರನ್ನು ಮಾತ್ರ ವರ್ಗಾವಣೆ ಮಾಡಲಾಗಿದೆ. ಸಲ್ಲಿಕೆಯಾಗಿರುವ ಅರ್ಜಿಗಳನ್ನು ಮುಂದಿನ ವರ್ಷ ಆದ್ಯತೆಯಲ್ಲಿ ಪರಿಗಣಿಸಲಾಗುವುದು. ಸಮವಸ್ತ್ರ, ಮುಂಬಡ್ತಿ, ರಜಾ ವೇತನಕ್ಕೆ ಸಂಬಂಧಿಸಿ ಅಧಿಕಾರಿಗಳ ಜತೆ ಚರ್ಚಿಸಿ ಶೀಘ್ರ ನೀಡಲು ವ್ಯವಸ್ಥೆ ಮಾಡಲಾಗುವುದು.

ಬಸವರಾಜ ಬೊಮ್ಮಾಯಿ, ಗೃಹ ಸಚಿವರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net