ಕೆಜಿಎಫ್: ಗ್ರಾಮ ಪಂಚಾಯಿತಿಯಿಂದ ಸರ್ಕಾರಿ ಖರಾಬು ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಖಾತೆ ಮಾಡಿಕೊಟ್ಟಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿ ಸೇರಿ ಒಟ್ಟು 17 ಮಂದಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ತಾಲೂಕಿನ ಘಟ್ಟಕಾಮಧೇನಹಳ್ಳಿ ಗ್ರಾಮ ಪಂಚಾಯಿತಿಯ ಸರ್ವೇ ನಂ.17ರಲ್ಲಿನ ಖರಾಬು ಜಮೀನಿನಲ್ಲಿ 2016ರಲ್ಲಿ ಅಂದಿನ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜು ಭಾರ್ಗವಿ, ಉಪಾಧ್ಯಕ್ಷ ಶಶಿಧರ್, ಪಿಡಿಒ ರತ್ನಮ್ಮ ಹಾಗೂ ಇತರರು 12 ಮಂದಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ದಂತೆ ದೂರು ದಾಖಲಾಗಿ ಕೆಜಿಎಫ್ನ ನ್ಯಾಯಾ ಲಯದಲ್ಲಿ ಪ್ರಕರಣದ ವಿಚಾರಣೆ ಮುಗಿದಿದ್ದು, ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಂ.ಮಂಜು ಅವರು ಜ.28ರಂದು ತೀರ್ಪು ಪ್ರಕಟಿಸಿದ್ದು, ಅಂದಿನ ಅಧ್ಯಕ್ಷೆ ಮಂಜು ಭಾರ್ಗವಿ, ಉಪಾಧ್ಯಕ್ಷ ಶಶಿಧರ್, ಪಿಡಿಒ ರತ್ನಮ್ಮ, ಬಿಲ್ ಕಲೆಕ್ಟರ್ ಮತ್ತು ಡಿಇಒ ನಾರಾಯಣಸ್ವಾಮಿ, ರಾಜೇಂದ್ರ ಮತ್ತು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದ 12 ಮಂದಿ ಫಲಾನುಭವಿಗಳಾದ ಮುರುಗೇಶ್, ಕದಂಬವತಿ, ಪ್ರಿಯಾ, ಸುಬ್ರಹ್ಮಣಿ, ಶ್ರೀನಿವಾಸ್, ಶ್ರೀಧರ್, ಅಣ್ಣಾದೊರೈ, ಆರ್.ಪಾಂಡುರಂಗನ್, ರವಿಚಂದ್ರನ್, ಬಿ.ಗಂಗಾಧರಂ, ಜಗದಂಬಾಳ್ ಮತ್ತು ಎಡ್ವಿನ್ಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಅಧ್ಯಕ್ಷೆ, ಉಪಾಧ್ಯಕ್ಷ, ಪಿಡಿಒ ಮತ್ತು ಸಿಬ್ಬಂದಿಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 6 ಸಾವಿರ ರೂ. ದಂಡ, ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದ 12 ಮಂದಿ ಫಲಾನುಭವಿಗಳ ಪೈಕಿ ಬಿ.ಗಂಗಾಧರಂ, ಜಗದಂಬಾಳ್ ಮತ್ತು ಎಡ್ವಿನ್ ಅವರು ಮೃತಪಟ್ಟಿದ್ದು, ಉಳಿದ 9 ಮಂದಿಗೆ ಒಂದು ವರ್ಷ ಕಾರಾಗೃಹ ವಾಸ ಮತ್ತು ತಲಾ 2ಸಾವಿರ ರೂ.ದಂಡ ವಿಧಿಸಲಾಗಿದೆ.