

ವೇಶ್ಯಾವಾಟಿಕೆ ನಡೆಸುತ್ತಿದ್ದ ಮಹಿಳೆಗೆ 7 ವರ್ಷ ಕಾರಾಗೃಹ ಶಿಕ್ಷೆಯೊಂದಿಗೆ 12 ಸಾವಿರ ರೂ. ದಂಡ ವಿಧಿಸಿ ಮೈಸೂರಿನ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ(ಭ್ರಷ್ಟಾಚಾರ ನಿಗ್ರಹ ವಿಶೇಷ ನ್ಯಾಯಾಲಯ) ನ್ಯಾಯಾಧೀಶೆ ಭಾಗ್ಯಾ ಆದೇಶಿಸಿದ್ದಾರೆ.
ಮಥುರಾನಗರದ ಶೋಭಾ ಶಿಕ್ಷೆಗೆ ಗುರಿಯಾದ ಮಹಿಳೆ. ಶೋಭಾ ತಮ್ಮ ಮನೆಯಲ್ಲಿ ಮೈಸೂರು ಜಿಲ್ಲೆ ಸೇರಿದಂತೆ ಪಶ್ಚಿಮ ಬಂಗಾಳದಿಂದ ಯುವತಿಯರನ್ನು ಕರೆಯಿಸಿಕೊಂಡು ವೇಶ್ಯಾವಾಟಿಕೆಯಲ್ಲಿ ತೊಡಗಿಸಿ ಹಣ ಸಂಪಾದನೆ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ 2016ರ ಜೂನ್ 21ರಂದು ಆ್ಯಂಟಿ ಹ್ಯೂಮನ್ ಟ್ರಾಫಿಕಿಂಗ್ ಯೂನಿಟ್‌ನ ಇನ್ಸ್‌ಪೆಕ್ಟರ್ ಆಗಿದ್ದ ಚಂದ್ರಕಲಾ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶೋಭಾ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು.
ಬಳಿಕ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶೆ ಭಾಗ್ಯಾ ಅವರು ಶೋಭಾ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ಅವರು ವಾದ ಮಂಡಿಸಿದ್ದರು.