

ಸಿದ್ದಾಪುರ: ಸಿಟಿ ಬಾಯ್ಸ ಯುವ ಸಂಘ ವತಿಯಿಂದ ಆಯೋಜಿಸಿದ್ದ ಟರ್ಫ್ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜೈ ಭೀಮ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.
ಸಿದ್ದಾಪುರ ಗ್ರಾಮ ಪಂಚಾಯಿತಿ ಮಟ್ಟದ ಆಟಗಾರರನ್ನು ಒಳಗೊಂಡ 22 ತಂಡಗಳ ನಡುವೆ ಇಲ್ಲಿನ ಸ್ಟೈಕರ್ಸ್ ಎಡ್ಜ್ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಲ್ ಅಮೀನ್ ಗುಹ್ಯ ತಂಡ ನಿಗದಿತ ನಾಲ್ಕು ಓವರ್‌ಗಳಲ್ಲಿ 34 ರನ್ ಗಳಿಸಿತು. ತಂಡದ ಪರವಾಗಿ ಸುಜು 20 ರನ್ ಗಳಿಸಿದರು. ಜೈ ಭೀಮ್ ತಂಡದ ಪರವಾಗಿ ರಂಜೀವ್ ಎರಡು ವಿಕೆಟ್ ಪಡೆದರು. ಗುರಿ ಬೆನ್ನಟ್ಟಿದ ಜೈ ಭೀಮ್ ತಂಡ 3.1 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು. ನಾಯಕ ರಾಝಿಕ್ 12 ಹಾಗೂ ರಂಜೀವ್ 19 ರನ್ ಗಳಿಸಿದರು.
ಫೈನಲ್ ಪಂದ್ಯದಲ್ಲಿ ಆಲ್ ರೌಂಡರ್ ಆಟ ತೋರಿದ ರಂಜೀವ್ ಪಂದ್ಯ ಪುರುಷೋತ್ತಮ, ಡೋಮಿನೋಟರ್ಸ್ ತಂಡದ ಅಜ್ಮಲ್ ಸರಣಿ ಶ್ರೇಷ್ಠ ಹಾಗೂ ಬೆಸ್ಟ್ ಬ್ಯಾಟ್ಸ್‌ಮನ್, ಅಡಿಯೋಸ್ ಅಮಿಗೋಸ್ ತಂಡದ ಯಾಕೂಬ್ ಬೆಸ್ಟ್ ಬೌಲರ್, ಹುಸೈನ್ ಫ್ರೆಂಡ್ಸ್ ತಂಡದ ಬಾಸಿತ್ ಬೆಸ್ಟ್ ಕ್ಯಾಚ್, ಅಲ್ ಅಮೀನ್ ತಂಡದ ಅಝರ್ ಎಮರ್ಜಿಂಗ್ ಫ್ಲೇಯರ್, ಪವರ್ ಲೈನ್ ತಂಡದ ಚಾಚು ಲೆಜೆಂಡ್ ಫ್ಲೇಯರ್, ಪ್ಯಾರಡೈಸ್ ತಂಡದ ಬಶೀರ್ ಸೀನಿಯರ್ ಫ್ಲೇಯರ್, ಅಲ್ ಅಮೀನ್ ತಂಡದ ವಿನೋದ್ ಸೂಪರ್ ಸೀನಿಯರ್ ಫ್ಲೇಯರ್, ಡೋಮಿನೋಟರ್ಟ್ ತಂಡದ ಯೂನುಸ್ ಹಾಗೂ ಸುಹೈಲ್ ಉತ್ತಮ ಫಿಲ್ಡರ್ ಪ್ರಶಸ್ತಿ ಪಡೆದುಕೊಂಡರು.
ಸಮಾರೋಪ ಸಮಾರಂಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವಿ.ಕೆ ಬಶೀರ್, ಸಿಟಿ ಬಾಯ್ಸ್ ಯುವ ಸಂಘದ ಅಧ್ಯಕ್ಷ ಎ.ಎಸ್.ಮುಸ್ತಫ, ಗ್ರಾಮ ಪಂಚಾಯಿತಿ ಸದಸ್ಯರಾದ ಜಾಫರ್, ಹಸ್ಸನ್ ಪ್ರಮುಖರಾದ ಬೆಳ್ಳಿಯಪ್ಪ, ಕೆ.ಯು ಯೂಸುಫ್, ಕೆ.ಯು. ಮುಸ್ತಫ, ಅಸ್ಕರ್, ರವಿ, ಸಿದ್ದಿಕ್ ಸೇರಿದಂತೆ ಮತ್ತಿತರರು ಇದ್ದರು.
ಪಂದ್ಯಾವಳಿಯ ತೀರ್ಪುಗಾರರಾಗಿ ನೆಲ್ಯಹುದಿಕೇರಿಯ ಮುಸ್ತಫ, ನಜೀಬ್ ಹಾಗೂ ಸ್ಕೋರರ್ ಆಗಿ ರಾಧ ಮತ್ತು ಚಿಂಜು ಕಾರ್ಯನಿರ್ವಹಿಸಿದರು.