

ಮಂಡ್ಯ: ಇಲ್ಲಿನ ನೆಹರುನಗರ ತಮಿಳು ಕಾಲನಿನ ಗುಡಿಸಲುಗಳಿಗೆ ಬೆಂಕಿ ಬಿದ್ದು 17 ವರ್ಷ ಕಳೆದಿದ್ದರೂ ಇಲ್ಲಿವರೆಗೆ ಮೂಲ ಸೌಲಭ್ಯ ಮತ್ತು ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಜೈ ಭೀಮ್ ಸಂಘಟನೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದ ಕಾರ್ಯಕರ್ತರು, ಬೇಡಿಕೆಗೆ ಈಡೇರಿಸಬೇಕೆಂದು ಘೋಷಣೆ ಕೂಗಿದರು. ನಗರದ ತಮಿಳು ಕಾಲನಿಯ ಗುಡಿಸಲುಗಳಿಗೆ 2008ರಲ್ಲಿ ಬೆಂಕಿ ಬಿದ್ದು ಸುಟ್ಟು ಹೋದವು. ಆದರೆ ಇಲ್ಲಿತನಕ ಅಧಿಕಾರಿಗಳು ಪರಿಹಾರ ನೀಡಿಲ್ಲ. ಸಂವಿಧಾನದ ಪ್ರಕಾರ ಮೂಲ ಸೌಲಭ್ಯಗಳಾದ ಭೂಮಿ, ನೀರು, ವಾಸಿಸಲು ಯೋಗ್ಯವಾದ ಮನೆ, ಶಿಕ್ಷಣ, ಮಹಿಳೆಯರ ಸರ್ವೋತೋಮುಖ ಅಭಿವೃದ್ಧಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಗುಡಿಸಲು ಸುಟ್ಟುಹೋದ ದಿನದಿಂದಲೂ ಪರಿಹಾರ ಮಾತ್ರ ನೀಡಿಲ್ಲ. ತೀವ್ರವಾಗಿ ನೊಂದಿರುವ ಇಲ್ಲಿನ ಗುಡಿಸಲು ನಿವಾಸಿಗಳಿಗೆ ತಕ್ಷಣ ಪರಿಹಾರ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ವೆಂಕಟೇಶ್, ವಿಜಯ್‌ಕುಮಾರ್, ರಂಗನಾಥ್, ಸುರೇಶ್, ಬಾಬು, ಮುರುಘನ್, ದೇವರಾಜು, ಅರ್ಜುನ್, ನಾರಾಯಣಸ್ವಾಮಿ ಇತರರಿದ್ದರು.