ರೇಬೀಸ್ ರೋಗ ನಿಯಂತ್ರಣಕ್ಕೆ ಮುಂಜಾಗ್ರತೆ ಅತ್ಯಗತ್ಯ,ಡಿಸಿ

1664433162947 (1)2121
Published on

ಚಿತ್ರದುರ್ಗ: ರೇಬೀಸ್ ರೋಗ ನಿಯಂತ್ರಣಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯವೆಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.

ಪಶು ವೈದ್ಯಕೀಯ ಸೇವಾ ಇಲಾಖೆ ನಗರದ ಕ್ರೀಡಾ ಭವನದಲ್ಲಿ ಗುರುವಾರ ವಿಶ್ವ ರೇಬೀಸ್ ದಿನಾಚರಣೆ ಅಂಗವಾಗಿ ಇಲಾಖೆ ಏರ್ಪಡಿಸಿದ್ದ ರೇಬೀಸ್ ಮತ್ತು ಪ್ರಾಣಿ ಜನ್ಯ ರೋಗಗಳ ನಿಯಂತ್ರಣ ಕುರಿತ ತಾಂತ್ರಿಕ ವಿಚಾರ ಸಂಕಿರಣ,ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಾಣಿಗಳ ಮೂಲಕ ಮನುಷ್ಯರಲ್ಲಿ ಹರಡುವ ರೇಬೀಸ್ ಸೋಂಕು ಜೀವಕ್ಕೆ ಅಪಾಯವನ್ನು ಉಂಟು ಮಾಡಲಿದೆ. ಈ ರೋಗಕ್ಕೆ ಒಂದು ಬಾರಿ ತುತ್ತಾದರೆ ಪರಿಹಾರವಿಲ್ಲ. ಆದ್ದರಿಂದ ಮುಂಜಾಗ್ರತಾ ಕ್ರಮಗಳು ಅಗತ್ಯವಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಸೂಕ್ತ ಜಾಗೃತಿ ಮೂಡಿಸಬೇಕಿದೆ ಎಂದರು.

ಜಿಪಂ ಡಾ.ಕೆ.ನಂದಿನಿದೇವಿ ಮಾತನಾಡಿ,ಜಿಲ್ಲೆಯಲ್ಲಿ ಯಾರೂ ಕೂಡ ರೇಬೀಸ್ ರೋಗಕ್ಕೆ ತುತ್ತಾಗಬಾರದು. ಭಾರತ ರೇಬೀಸ್ ಮುಕ್ತ ದೇಶವಾಗುವ ಮೊದಲು ಆಯಾ ತಾಲೂಕುಗಳು ರೇಬೀಸ್ ಮುಕ್ತವಾಗಬೇಕು. ಈಚೆಗೆ ಸಾಕು ಪ್ರಾಣಿಗಳ ಸಂಖ್ಯೆ ಹೆಚ್ಚಿದೆ. ಆದ್ದರಿಂದ ಪ್ರಾಣಿಜನ್ಯ ರೋಗಗಳ ಕುರಿತು ಅರಿವು ಮೂಡಿಸ ಬೇಕಿದೆ ಎಂದರು.

ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ,ರೇಬೀಸ್‌ನಿಂದಾಗಿ ದೇಶದಲ್ಲಿ ವಾರ್ಷಿಕವಾಗಿ 50 ಸಾವಿರ ಜನ ಮರಣ ಹೊಂದಿದ್ದಾರೆ ಎಂದರು. ಡಿಎಚ್‌ಒ ಡಾ.ಆರ್.ರಂಗನಾಥ್ ಮಾತನಾಡಿ,ರೇಬೀಸ್ ರೋಗದಿಂದ ಶೇ.100 ಸಾವು ಸಂಭವಿಸುತ್ತದೆ ಎಂದರು.

ಪಶು ವೈದ್ಯಕೀಯ ಸೇವಾ ಇಲಾಖೆ ಡಿಡಿ ಡಾ.ಎಸ್.ಕಲ್ಲಪ್ಪ ಮಾತನಾಡಿ,ಗೋವಾ ರೇಬೀಸ್ ಮುಕ್ತ ರಾಜ್ಯವಾಗಿದ್ದು,ಕೇರಳದಲ್ಲೂ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಮ್ಮ ರಾಜ್ಯವನ್ನೂ ರೇಬೀಸ್ ಮುಕ್ತ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ. ಈ ವರ್ಷ ನಾಯಿಗಳಿಗೆ ರೇಬೀಸ್ ಲಸಿಕೆ ನೀಡಲಾಗುತ್ತಿದೆ ಎಂದರು. ಶಿವಮೊಗ್ಗದ ಹೊಸೂರು ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಡಾ.ಸುನೀಲ್ ಕುಮಾರ್ ಉಪನ್ಯಾಸ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎನ್.ಕಾಶಿ,ಪಶು ವೈದ್ಯಕೀಯ ಸೇವಾ ಇಲಾಖೆ ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ.ಎನ್.ಬಾಬುರತ್ನ, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮುಖ್ಯಪಶು ವೈದ್ಯಾಧಿಕಾರಿ ಡಾ.ಸಿ.ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

ಬುರಜನಹಟ್ಟಿ

ರೇಬೀಸ್ ಅಥವಾ ಹುಚ್ಚು ನಾಯಿ ರೋಗ ಎಂಬ ಮಹಾಮಾರಿ,ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಒಂದು ವೈರಾಣು ರೋಗ ವಾಗಿದೆ. ನಾಯಿ ಕಡಿತಕ್ಕೆ ನಿಯಮಿತವಾಗಿ ಎಆರ್‌ವಿ ಚುಚ್ಚುಮದ್ದು ಪಡೆಯುವುದರಿಂದ ರೇಬೀಸ್ ನಿಯಂತ್ರಿಸಬಹುದೆಂದು ಎಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.

ನಗರದ ಬುರುಜನಹಟ್ಟಿ ಏಕನಾಥೇಶ್ವರಿ ಸಮುದಾಯ ಭವನದಲ್ಲಿ ವಿಶ್ವ ರೇಬೀಸ್ ದಿನದ ಅಂಗವಾಗಿ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿ,ನಾಯಿ ಕಚ್ಚಿದಾಗ ಕೂಡಲೇ ಚುಚ್ಚುಮದ್ದುಗಳನ್ನು ತೆಗೆದುಕೊಂಡರೆ ಮರಣವನ್ನು ತಪ್ಪಿಸ ಬಹುದೆಂದರು.

ನಗರಸಭಾ ಸದಸ್ಯೆ ಪಿ.ಕೆ. ಮೀನಾಕ್ಷಿ ಮಾತನಾಡಿ,ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಜಿಲ್ಲಾ ಆರೋಗ್ಯ ಮೇಲ್ವಿಚಾರಾಣಾಧಿಕಾರಿ ಎಚ್.ಆಂಜನೇಯ,ಎನ್.ಎಸ್.ಮಂಜುನಾಥ ಮಾತನಾಡಿದರು. ಶ್ರೀಧರ್,ಗೋಪಾಲಕೃಷ್ಣ, ಸಂದೀಪ್,ಮೀನಾಕ್ಷಿ,ಪೂರ್ಣಿಮಾ,ಸತ್ಯನಾರಾಯಣ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net