ಬದಲಾದ ಜೀವನ ಶೈಲಿಯಿಂದ ಅನಾರೋಗ್ಯ: ಡಿಸಿ ಡಾ.ಎಚ್.ಎನ್. ಗೋಪಾಲಕೃಷ್ಣ ಹೇಳಿಕೆ

20_11_Mdy_04(Jatha)
Published on

ಮಂಡ್ಯ: ಆಧುನಿಕ ಜೀವನಶೈಲಿಯ ಒತ್ತಡದಲ್ಲಿ ನಾವು ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಆಹಾರ ಪದ್ಧತಿ, ಕೆಲಸದ ಶೈಲಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿರುವುದರಿಂದ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ ಹೇಳಿದರು.

ವಿಶ್ವ ಪೈಲ್ಸ್ ದಿನಾಚರಣೆ ಅಂಗವಾಗಿ ಎಸ್.ಡಿ. ಜಯರಾಂ ಆಸ್ಪತ್ರೆ ಹಾಗೂ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜಿನಿಂದ ನಗರದ ಡಿಸಿ ಕಚೇರಿ ಬಳಿ ಆಯೋಜಿಸಿದ್ದ ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದು ನಾವು ವೇಗದ ಜೀವನದಲ್ಲಿ ಸಾಗುತ್ತಿದ್ದೇವೆ. ಫಾಸ್ಟ್‌ ಫುಡ್ ಬಳಕೆ ಹೆಚ್ಚಾಗಿದೆ. ಸರಿಯಾದ ಸಮಯಕ್ಕೆ ನಿದ್ರೆ ಮಾಡದಿರುವುದು, ವ್ಯಾಯಾಮ ಇಲ್ಲದ ಜೀವನ, ನೆಮ್ಮದಿಯಾಗಿ ಕುಟುಂಬಸ್ಥರೊಂದಿಗೆ ಊಟವನ್ನೂ ಸೇವಿಸದಿರುವಷ್ಟು ತಾಳ್ಮೆ ಇಲ್ಲದಾಗಿದೆ. ಇಂತಹ ಒತ್ತಡದಿಂದ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಅನೇಕ ರೋಗಗಳು ಕಾಣಿಸಿಕೊಳ್ಳುತ್ತಿವೆ ಎಂದರು.

ರಾಜ್ಯ ಒಕ್ಕಲಿಗರ ಸಂದ ನಿರ್ದೇಶಕ ಅಶೋಕ್ ಜಯರಾಂ ಮಾತನಾಡಿ, ನರ್ಸಿಂಗ್ ಕಾಲೇಜುಗಳ ಸಹಕಾರದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ನಡೆಸಲಾಗುತ್ತಿದೆ. ಜನರ ಜೀವನ ಶೈಲಿ, ಹೆಚ್ಚಾದ ಒತ್ತಡದಿಂದ ಅನಾರೋಗ್ಯ ಸಮಸ್ಯೆಗಳು ಉಲ್ಬಣವಾಗುತ್ತಿವೆ. ಪ್ರತಿ ಮೂವರಲ್ಲಿ ಒಬ್ಬರಿಗೆ ಪೈಲ್ಸ್ ಲಕ್ಷಣಗಳು ಪತ್ತೆಯಾಗುತ್ತಿದೆ. ಗ್ರಾಮೀಣ ಪ್ರದೇಶದಿಂದ ಪೈಲ್ಸ್ ರೋಗಿಗಳು ಆಸ್ಪತ್ರೆಗೆ ಬರುವುದು ಹೆಚ್ಚಾಗುತ್ತಿದೆ. ಬಯಲು ಮುಕ್ತ ಶೌಚಗೃಹ ವ್ಯವಸ್ಥೆ ನಿರ್ಮಾಣವಾಗಿದ್ದರೂ ಜನರು ಬಯಲಿನಲ್ಲೇ ಶೌಚ ಮಾಡುವುದು ರೋಗಗಳಿಗೆ ಕಾರಣವಾಗಿದೆ ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಎಸ್.ಡಿ.ಜಯರಾಂ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಾದೇಶ್, ಆಡಳಿತಾಧಿಕಾರಿ ಅಕ್ಷಯ್, ಎಸ್.ಡಿ.ಜಯರಾಂ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಶೃತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net