ಸಿಎಂ ಸಮ್ಮುಖದಲ್ಲಿ ಕುಂಬಾರರೊಂದಿಗೆ ಚರ್ಚೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ

12_02_Mdy_03(Kumabra Samavesha)..
Published on

ಮಂಡ್ಯ: ಕುಂಬಾರ ಸಮುದಾಯದವರ ಬೇಡಿಕೆ ಸಂಬಂಧ ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಲಾಗುವುದು. ಈ ವೇಳೆ ಸಮುದಾಯದವರ ನಿಯೋಗವನ್ನು ಕರೆದುಕೊಂಡು ಹೋಗಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ಕುಂಬಾರ ಜಾಗೃತಿ ವೇದಿಕೆ, ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗೀಯ ಮಟ್ಟದ ಕುಂಬಾರರ ಜನಜಾಗೃತಿ ಸಮಾವೇಶ ಮತ್ತು ಕುಂಭರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕುಂಬಾರರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇನೆ. ಸಮುದಾಯದ ಆರ್ಥಿಕ ಅಭಿವೃದ್ಧಿಗಾಗಿ ಕುಂಬ ಕಲಾ ಮಂಡಳಿ ಸ್ಥಾಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ನೀಡಿದ್ದಾರೆ. ಈ ಬಗ್ಗೆ ಸಮಾಲೋಚಿಸಲಾಗುವುದು. ಜತೆಗೆ ಶೀಘ್ರದಲ್ಲೇ ಈಡೇರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಮಾಜಕ್ಕೆ ದಾರಿ ತೋರಿದಂತ ಸರ್ವಜ್ಞ ಅವರನ್ನು ಇಂದಿಗೂ ನೆನಯಬೇಕಿದೆ. ಸಮಾಜದಲ್ಲಿ ತಮ್ಮ ನೋವುಗಳನ್ನು ಹೇಳಿಕೊಳ್ಳದ ಅನೇಕ ಜನರಿದ್ದಾರೆ. ಅವರು ಸರ್ಕಾರವು ದನಿಯಾಗಿ ಬರಬೇಕು ಎಂಬುವ ಆಶಯದಲ್ಲಿದ್ದಾರೆ. ಅದರಂತೆ ನೆರವಿಗೆ ಸರ್ಕಾರ ಸದಾ ಬರಲಿದೆ. ನಾನು ಸೇಂದಿ ತೆಗೆಯುವ ಈಡಿಗ ಜಾತಿಯಲ್ಲಿ ಜನಿಸಿದವನು. ಸೇಂದಿ ತೆಗೆಯಲು ಯಾವ ಪಾತ್ರೆಯು ಹಿಡಿಯುವುದಿಲ್ಲ, ಅದು ಕುಂಬಾರರು ಮಾಡಿದ ಮಡಿಕೆಯೇ ಬೇಕಿದೆ ಎಂದರು.

ಕ್ರೆಡಿಟ್ ಸಂಸ್ಥೆಯ ಸಿಇಒ ಡಾ.ಎಂ.ಪಿ.ವರ್ಷ ಮಾತನಾಡಿ, ಕುಂಬಾರರು ಅವಲಂಬಿತ ಕಸುಬು ಅವನತಿಯ ಹಂಚಿನಲ್ಲಿದೆ. ಆದ್ದರಿಂದ ಸಮುದಾಯದ ಆರ್ಥಿಕ ಬಲವರ್ಧನೆಗಾಗಿ ಬಜೆಟ್‌ನಲ್ಲಿ ಕುಂಬಾರರ ಅಭಿವೃದ್ಧಿ ನಿಗಮ ಸ್ಥಾಪಿಸಿ ಕನಿಷ್ಟ 200 ಕೋಟಿ ಅನುದಾನ ನೀಡಬೇಕು. ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ನಿವೇಶನ ಮಂಜೂರು ಮಾಡಿಸಿಕೊಡಬೇಕು. ರಾಜ್ಯದ ವಿವಿಧೆಡೆ ಕೂಡಾ ಸಮುದಾಯದ ಅಗತ್ಯತೆಗೆ ಅನುಗುಣವಾಗಿ ನಿವೇಶನ ಕಲ್ಪಿಸಬೇಕು. ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಪರ್ಧಿಸಿ ಗೆಲ್ಲುವ ಶಕ್ತಿ ಇಲ್ಲದಿರುವ ಕುಂಬಾರ ಸಮುದಾಯವನ್ನು ರಾಜಕೀಯವಾಗಿ ಗಂಭೀರವಾಗಿ ಪರಿಗಣಿಸಬೇಕು. ವಿಧಾನ ಪರಿಷತ್ ಮತ್ತು ವಿವಿಧ ನಿಗಮ ಮಂಡಳಿ ನೇಮಕದಲ್ಲಿ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ತೆಲಸಂಗ ಕುಂಬಾರ ಗುಂಡಯ್ಯ ಮಹಾಸಂಸ್ಥಾನ ಮಠ ಕುಂಬಾರ ಗುರುಪೀಠದ ಬಸವಕುಂಬಾರ ಗುಂಡಯ್ಯ ಸ್ವಾಮೀಜಿ, ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಕೆ.ಅನ್ನದಾನಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಸರ್ವಜ್ಞ ಕುಂಬಾರ ಸೇವಾ ಟ್ರಸ್ಟ್ ಅಧ್ಯಕ್ಷ ಆರ್.ಶ್ರೀನಿವಾಸ್, ನಿವೃತ್ತ ಮುಖ್ಯ ಇಂಜಿನಿಯರ್ ಆರ್.ಶ್ರೀನಿವಾಸ್, ಡಿ.ದೇವರಾಜ ಅರಸು ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆ ಅಧ್ಯಕ್ಷ ಕೃಷ್ಣ, ಕರ್ನಾಟಕ ಜನಸೈನ್ಯ ಅಧ್ಯಕ್ಷ ಎರ‌್ರಿಸ್ವಾಮಿ, ಪಿ.ಎನ್.ಕಾಂತರಾಜು, ಕೆ.ವೆಂಕಟೇಶ್ ಇತರರಿದ್ದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪಂಕಜ, ಡಾ.ಮಹೇಶ್, ರೇಣುಕಾಂಬ, ಡಾ.ವೆಂಕಟೇಶ್, ಚಿದಾನಂದ, ಸೈಕಲ್ ಶಾಪ್ ಪುಟ್ಟಸ್ವಾಮಿ ಅವರಿಗೆ ಕುಂಭರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net