

ಮಂಡ್ಯ: ಸಾಮಾಜಿಕ ನ್ಯಾಯ ಒದಗಿಸಲು ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆ ಟೀಕಿಸುವವರು ಹಿಂದುಳಿದ ಸೇರಿದಂತೆ ಎಲ್ಲ ಸಮುದಾಯಗಳ ವಿರೋಧಿಗಳು ಎಂದು ಜಾಗೃತ ಕರ್ನಾಟಕ ಸಂಘಟನೆಯ ಸಂಚಾಲಕ ಎನ್.ನಾಗೇಶ್ ಆಕ್ರೋಶ ವ್ಯಕ್ತಪಡಿಸಿದರು.
ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಜಾತಿ ಸಮೀಕ್ಷೆಯು ಹಿಂದುಳಿದ ಸಮುದಾಯಗಳಿಗೆ ನಿಖರ ಹಾಗೂ ಪರಿಣಾಮಕಾರಿ ನ್ಯಾಯ ಒದಗಿಸಲು ಸಹಕಾರಿಯಾಗಲಿದೆ. ನಮ್ಮಿಂದ ಮತ ಪಡೆದು ಸಮೀಕ್ಷೆಯನ್ನು ವಿರೋಧಿಸುವ ಮೂಲಕ ಮಸಲತ್ತು ಮಾಡುವವರು ಎಲ್ಲ ಸಮುದಾಯಗಳನ್ನು ವಿರೋಧಿಸುವ ಖಳನಾಯಕರು ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ವಿ.ಸೋಮಣ್ಣ, ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಹಲವು ರಾಜಕಾರಣಗಳು ಹಾಗೂ ಮುಖಂಡರ ವಿರುದ್ಧ ಹಿಂದುಳಿದ ಸಮುದಾಯಗಳು ಒಟ್ಟಾಗಿ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುವುದು ಎಂದು ಹೇಳಿದರು.
ಸಂಚಾಲಕ ಪೃಥ್ವಿರಾಜ್ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಗಳ ಆಧಾರದ ಮೇಲೆ ಸರ್ಕಾರಗಳು ನೀತಿ ರೂಪಿಸಿ, ಸಾಮಾಜಿಕ ನ್ಯಾಯ ಜಾರಿ ಮಾಡಬೇಕು. ಈ ಹಿನ್ನಲೆ ಸುಪ್ರೀಂ ಕೋರ್ಟ್ ಎಲ್ಲ ರಾಜ್ಯಗಳಿಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ರಚನೆ ಹಾಗೂ ಆ ಆಯೋಗದಿಂದ ಪ್ರತಿ 10 ವರ್ಷಕ್ಕೊಮ್ಮೆ ಸಮೀಕ್ಷೆ ನಡೆಸುವಂತೆ ಹೇಳಿದೆ. ಈ ಹಿನ್ನಲೆ ರಾಜ್ಯ ಸರ್ಕಾರದ ಸಮೀಕ್ಷೆ ನ್ಯಾಯಯುವಾಗಿದೆ. ರಾಜ್ಯ ಸರ್ಕಾರ ಸಮೀಕ್ಷೆಯ ವೇಳೆ ಆಗುತ್ತಿರುವ ಲೋಪದೋಷಗಳನ್ನು ಕೂಡಲೇ ಬಗೆಹರಿಸಬೇಕು. ನಿಗದಿತ ಸಮಯದಲ್ಲಿ ಸಮರ್ಪಕ ಸಮೀಕ್ಷೆ ನಡೆಸುವುದು ಅತಿ ಮುಖ್ಯವಾಗಿದ್ದು, ಸಾಧ್ಯವಾಗದಿದ್ದರೆ ಸಮೀಕ್ಷೆ ನಡೆಸುವ ಸಮಯ ವಿಸ್ತರಿಸಬೇಕೆಂದು ಆಗ್ರಹಿಸಿದರು.
ಸಂಚಾಲಕರಾದ ಎನ್.ಎಸ್.ಜಗದೀಶ್, ಟಿ.ಎಂ.ಪ್ರಶಾಂತ್, ಸಂತೋಷ್, ಸುಬ್ರಮಣ್ಯಂ ಇದ್ದರು.