

ರಾಯಚೂರು: ಸಮಾಜದಲ್ಲಿ ಸಮಾನತೆಯ ಅರಿವು ಮೂಡಿಸುವುದರ ಜತೆಗೆ ದೇಶದ ಅಭಿವೃದ್ಧಿಗಾಗಿ ಉಪ ಪ್ರಧಾನಿಯಾಗಿದ್ದ ಜಗಜೀವನರಾಮ್ ಶ್ರಮಿಸಿದ್ದರು ಎಂದು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಹೇಳಿದರು.
ಸ್ಥಳೀಯ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಏರ್ಪಡಿಸಿದ್ದ ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಧಿಕಾರದಲ್ಲಿದ್ದಾಗ ಜಗಜೀವನರಾಮ್ ಅಕಾರಾವಯಲ್ಲಿ ಅಪಾರ ಸಾಧನೆ ಮಾಡಿದ್ದಾರೆ ಎಂದರು.
ಅಂತಹ ಮಹಾನ್ ವ್ಯಕ್ತಿಯ ತತ್ತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಪ್ರತಿಯೊಬ್ಬರು ಶಿಕ್ಷಣ ಪಡೆಯಲು ಮುಂದಾಗಬೇಕು. ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂದು ಹೇಳಿದರು.
ಸಾಹಿತಿ ಬಾಬು ಭಂಡಾರಿಗಲ್ ಮಾತನಾಡಿ, ಜಗಜೀವನರಾಮ್ ಕೃಷಿ, ಶಿಕ್ಷಣ ಸೇರಿದಂತೆ ಇನ್ನಿತರ ವಲಯದಲ್ಲಿ ಸಾಕಷ್ಟು ಅಭಿವೃದ್ಧಿಪರ ಕೆಲಸ ಮಾಡಿದ್ದು, ಸಮ ಸಮಾಜ ನಿರ್ಮಾಣ ಮಾಡುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ನಗರದ ರೈಲು ನಿಲ್ದಾಣದ ಹತ್ತಿರುವ ಬಾಬು ಜಗಜೀವನರಾಮ್ ಪುತ್ಥಳಿಗೆ ಸಚಿವ ಎನ್.ಎಸ್.ಬೋಸರಾಜು, ಜನಪ್ರತಿನಿಗಳು, ಸಮಾಜದ ಮುಖಂಡರು ಹಾಗೂ ಅಧಿಕಾರಿಗಳಿಂದ ಮಾಲಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವರಿಷ್ಠಾಕಾರಿ ಬಿ.ನಿಖಿಲ್, ನಗರಸಭೆ ಪೌರಾಯುಕ್ತ ಜಿ.ಎನ್.ಛಲಪತಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹೇಶ ಪೋತದಾರ, ಪರಿಶಿಷ್ಟ ವರ್ಗಗಳ ಕಲ್ಯಾಣಾಕಾರಿ ರಾಜೇಂದ್ರ ಜಲ್ದಾರ್, ಪಶು ವೈದ್ಯಕೀಯ ಇಲಾಖೆ ಉಪನಿರ್ದೇಶಕ ಅಶೋಕ ಕೋಲ್ಕಾರ ಉಪಸ್ಥಿತರಿದ್ದರು.