

ಮೈಸೂರು: ಕಾವೇರಿ ಕೂಗು ಅಭಿಯಾನ ಯಶಸ್ವಿಯಾಗಿದ್ದು, ರೈತರಿಗೆ 1.10 ಕೋಟಿ ಸಸಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಈಶಾ ಫೌಂಡೇಷನ್ ಅಧ್ಯಕ್ಷ ಜಗ್ಗಿ ವಾಸುದೇವ ತಿಳಿಸಿದರು.
ನಗರದ ಸುತ್ತೂರು ಮಠಕ್ಕೆ ಗುರುವಾರ ಭೇಟಿ ನೀಡಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರೊಂದಿಗೆ ಕೆಲ ಸಮಯ ಮಾತನಾಡಿದ ಅವರು, ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ತಮಿಳುನಾಡಿನಲ್ಲಿ ಪುರಾತನ ದೇವಾಲಯಗಳು ಉಳಿಯಬೇಕಿದೆ. ಅಲ್ಲಿ 1200 ದೇವಾಲಯಗಳಲ್ಲಿ ಪೂಜೆ ನಡೆಯುತ್ತಿಲ್ಲ. ಸರ್ಕಾರ ನಿರ್ಲಕ್ಷೃ ತೋರಿದರೆ ಮುಂದಿನ 50 ವರ್ಷಗಳಲ್ಲಿ ಅವುಗಳೂ ಇರುವುದಿಲ್ಲ. ದೇಗುಲಗಳನ್ನೂ ಬ್ಯುಸಿನೆಸ್ ಸೆಂಟರ್ ಮಾಡಿಕೊಂಡಿದ್ದಾರೆ ಎಂದು ಕಳವಳ ವ್ಯಕ್ತ ಪಡಿಸಿದರು.
ಅಲ್ಲದೆ, ತಮಿಳುನಾಡಿನಲ್ಲಿ ಪುರಾತನ ದೇವಾಲಯದಲ್ಲಿ ಮೂಲ ಮೂರ್ತಿಗಳನ್ನು ದುಷ್ಕರ್ಮಿಗಳು ಕಳವು ಮಾಡಿದ್ದಾರೆ. ಅವುಗಳನ್ನು ರಕ್ಷಣೆ ಮಾಡಲು ಅಲ್ಲಿನ ಸರ್ಕಾರ ಮುಂದಾಗಬೇಕಿದೆ ಎಂದರು.
ಬೈಕ್‌ನಲ್ಲಿ ಮಠಕ್ಕೆ ಭೇಟಿ:
ಜಗ್ಗಿ ವಾಸುದೇವ ಅವರು ಬೈಕ್‌ನಲ್ಲೇ ಮಠಕ್ಕೆ ಆಗಮಿಸಿದರು. ಅವರಿಗೆ ಮಠದಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ‘ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ನೋಡಿ ಬಹಳ ದಿನಗಳು ಆಗಿತ್ತು. ಕರೊನಾ ಬಂದ ಮೇಲೆ ನೋಡಿಯೇ ಇರಲಿಲ್ಲ. ಅವರನ್ನು ನೋಡಲು ಹಾಗೂ ಕಾವೇರಿ ಕೂಗು ಅಭಿಯಾನದ ಬಗ್ಗೆ ಮಾತನಾಡಲು ಬಂದಿದ್ದೆ’ ಎಂದು ತಿಳಿಸಿದರು. ತುಮಕೂರಿನ ಸಿದ್ಧಗಂಗಾ ಮಠದ ಶ್ರೀಸಿದ್ಧಲಿಂಗ ಸ್ವಾಮೀಜಿ ಈ ಸಂದರ್ಭದಲ್ಲಿದ್ದರು.